ಏರ್ ಇಂಡಿಯಾ 171 ವಿಮಾನ ದುರಂತದಲ್ಲಿ ಸಾವಿಗೀಡಾದ ಮಣಿಪುರದ ಕುಕಿ ಯುವತಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವುದು ಹೇಗೆಂಬುದಕ್ಕೆ ಕೊನೆಗೂ ‘ದಾರಿ’ ಸಿಕ್ಕಿದೆ!
ಮಣಿಪುರ ಜನಾಂಗೀಯ ಸಂಘರ್ಷದಿಂದಾಗಿ ಇಡೀ ರಾಜ್ಯವು ಗುಡ್ಡಗಾಡು ಮತ್ತು ಕಣಿವೆಯಾಗಿ ಇಬ್ಭಾಗವಾಗಿದ್ದು, ಕುಕಿಗಳ ಪ್ರದೇಶಕ್ಕೆ ಮೈತೇಯಿಗಳು, ಮೈತೇಯಿಗಳ ಪ್ರದೇಶಕ್ಕೆ ಕುಕಿಗಳು ಹೋಗಲಾರರು. ಆದರೆ ವಿಮಾನ ದುರಂತದಲ್ಲಿ ಸಾವಿಗೀಡಾದ ಇಬ್ಬರು ಮಣಿಪುರ ಯುವತಿಯರ ಪೈಕಿ ಒಬ್ಬರು ಕುಕಿಯವರಾಗಿದ್ದು, ರಾಜಧಾನಿ ಇಂಫಾಲದಿಂದ ಗುಡ್ಡಗಾಡಿಗೆ ಮೃತದೇಹ ಸಾಗಿಸುವುದು ಹೇಗೆಂಬುದೇ ಪ್ರಶ್ನೆಯಾಗಿತ್ತು.
ದುರಂತಕ್ಕೀಡಾದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳಲ್ಲಿ ಒಬ್ಬರಾದ ನ್ಗಾಂಥೋಯ್ ಕೆ ಶರ್ಮಾ ಮೈತೇಯಿ ಸಮುದಾಯದವರು. ಇನ್ನೊಬ್ಬರು ಲ್ಯಾಮ್ನುಂಥಿಯೆಮ್ ಸಿಂಗ್ಸನ್ ಕುಕಿ-ಝೋ ಸಮುದಾಯಕ್ಕೆ ಸೇರಿದವರು. ಸಿಂಗ್ಸನ್ ಅವರ ಕುಟುಂಬ ಈಗ ಕುಕಿ ಪ್ರಾಬಲ್ಯದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿದೆ.
ಇದನ್ನೂ ಓದಿರಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಣಿಪುರ ಯುವತಿಯರ ಸಾವು; ಶವ ಸಾಗಿಸುವುದೇ ಸವಾಲು: ಕಾರಣ?
ಮೃತದೇಹವನ್ನು ಇಂಫಾಲ ವಿಮಾನ ನಿಲ್ದಾಣಕ್ಕೆ ತರುವುದು ದುಸ್ತರವಾಗಿತ್ತು. ಅಥವಾ ಪಕ್ಕದ ರಾಜ್ಯ ಮಿಝೋರಾಂನ ಐಜ್ವಾಲ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ಶವವನ್ನು ತಂದು, ಕುಕಿಗಳ ರಾಜಧಾನಿ ಎಂದೇ ಹೇಳಲಾಗುವ ಚೂರಾಚಾಂದ್ಪುರಕ್ಕೆ ರಸ್ತೆ ಮಾರ್ಗವಾಗಿ ಸಾಗಿಸಬಹುದಿತ್ತು. ಆದರೆ ಚೂರಾಚಾಂದ್ಪುರ ಕುಕಿಗಳ ಪ್ರದೇಶವಾದರೂ ಅಲ್ಲಿಂದ ಕಾಂಗ್‌ಪೋಕ್ಪಿಗೆ ಹೋಗಬೇಕಾದರೆ ಇಂಫಾಲವನ್ನು ಹಾದು ಹೋಗಬೇಕಾಗುತ್ತಿತ್ತು. ಈ ಮಾರ್ಗವೂ ಸಮಸ್ಯಾತ್ಮಕವಾಗಿತ್ತು. ಅಂತಿಮವಾಗಿ ಇನ್ನೊಂದು ಮಾರ್ಗವಿತ್ತು. ಸಿಂಗ್ಸನ್ ಅವರ ಶವವನ್ನು ಮತ್ತೊಂದು ನೆರೆಯ ರಾಜ್ಯ ನಾಗಾಲ್ಯಾಂಡ್‌ನ ದಿಮಾಪುರ ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ರಸ್ತೆ ಮೂಲಕ ಕಾಂಗ್‌ಪೋಕ್ಪಿಗೆ ತರುವುದು. ಏಕೆಂದರೆ ಮಾರ್ಗಮಧ್ಯದಲ್ಲಿ ಯಾವುದೇ ಮೈತೇಯಿ ಪ್ರದೇಶಗಳಿಲ್ಲ. ಈಗ ಇದೇ ಮಾರ್ಗವನ್ನು ಕುಟುಂಬ ಆಯ್ದುಕೊಂಡಿದೆ.
ಮಣಿಪುರದ ಇಬ್ಬರು ಕ್ಯಾಬಿನ್ ಸಿಬ್ಬಂದಿಗಳಲ್ಲಿ ಒಬ್ಬರಾದ ಸಿಂಗ್ಸನ್ ಅವರ ಮೃತದೇಹವನ್ನು ಡಿಎನ್‌ಎ ಮಾದರಿಗಳಿಂದ ಗುರುತಿಸಲಾಗಿದೆ ಎಂದು ಕುಟುಂಬ ತಿಳಿಸಿದೆ.
ಸಿಂಗ್ಸನ್ ಅವರ ಮೃತದೇಹವನ್ನು ಮೊದಲು ಅಹಮದಾಬಾದ್‌ನಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ತೆಗೆದುಕೊಂಡು ಬರಲಾಗುವುದು. ನಂತರ ರಸ್ತೆ ಮಾರ್ಗವಾಗಿ ದಿಮಾಪುರದಿಂದ ಸುಮಾರು 165 ಕಿ.ಮೀ ದೂರದಲ್ಲಿರುವ ಕಾಂಗ್‌ಪೋಕ್ಪಿಯ ತಮ್ಮ ಬಾಡಿಗೆ ಮನೆಗೆ ಕರೆದೊಯ್ಯಲಾಗುವುದು” ಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿರಿ: ಲುಧಿಯಾನ ಉಪಚುನಾವಣೆ: ಎಎಪಿ ಗೆದ್ದರೆ ಅಚ್ಚರಿ ಇಲ್ಲ – ಸೋಲು ಮಾತ್ರ ದುರಂತ
ಸಿಂಗ್ಸನ್ ಅವರ ಸೋದರಸಂಬಂಧಿ ಎನ್ ಕಿಪ್ಗೆನ್ ಡಿಜಿಟಲ್ ಅವರು ‘ದಿ ಪ್ರಿಂಟ್’ ಜೊತೆ ಮಾತನಾಡಿದ್ದು, “ಮೃತದೇಹವನ್ನು ಇಂಫಾಲ್ ಮೂಲಕ ತರುವುದನ್ನು ಕುಟುಂಬ ಬಯಸುವುದಿಲ್ಲ. ದಿಮಾಪುರ ಮಾರ್ಗವು ತೀರಾ ದೂರದ್ದಾದರೂ, ಇದೇ ರೂಟ್ ಆಯ್ದುಕೊಳ್ಳಲು ಸಿದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮೃತ ಕುಕಿ ಯುವತಿ ಸಿಂಗ್ಸನ್ ಅವರಿಗೆ ತಂದೆ ಇಲ್ಲ. ತನ್ನ ತಾಯಿ ಹಾಗೂ ಒಡಹುಟ್ಟಿದವರೊಂದಿಗೆ ಇಂಫಾಲ್‌ನ ನ್ಯೂ ಲಂಬುಲೇನ್ ಪ್ರದೇಶದಲ್ಲಿ ಅವರು ವಾಸಿಸುತ್ತಿದ್ದರು. ಆದರೆ ಸಂಘರ್ಷ ಭುಗಿಲೆದ್ದ ನಂತರ ಗುಡ್ಡಗಾಡು ಜಿಲ್ಲೆ ಕಾಂಗ್‌ಪೋಕ್ಪಿಗೆ ಸ್ಥಳಾಂತರವಾಗಬೇಕಾಯಿತು. ಹಿಂಸಾಚಾರದ ವೇಳೆ ಅವರ ಮನೆ ಲೂಟಿಯಾಯಿತು. “ಸಿಂಗ್ಸನ್ ಅವರ ತಾಯಿ ಈಗ ಕಾಂಗ್‌ಪೋಕ್ಪಿಯಲ್ಲಿ ನಮ್ಮೊಂದಿಗೆ ವಾಸವಿದ್ದಾರೆ” ಎಂದು ಸಿಂಗ್ಸನ್ ಅವರ ಚಿಕ್ಕಪ್ಪ ಹಹಾವೊ ಹೈಪಿ ಹೇಳಿದ್ದಾರೆ. (ಹೆಚ್ಚಿನ ವಿವರಗಳಿಗೆ ‘ಇಲ್ಲಿ’ ಕ್ಲಿಕ್ ಮಾಡಿ)
