ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಭಾರತದ ಮೊಟ್ಟ ಮೊದಲ ಅಂಡರ್‌ವಾಟರ್ ಮೆಟ್ರೋ (ನೀರೊಳಗಿನ ಮೆಟ್ರೋ) ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಜೊತೆಗೆ ಸುಮಾರು 15,400 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ್ದಾರೆ.
ಕೋಲ್ಕತ್ತಾದ ಪೂರ್ವ-ಪಶ್ಚಿಮ ಮೆಟ್ರೋದ 4.8 ಕಿಮೀ ಉದ್ದದ ಮಾರ್ಗವನ್ನು ಸುಮಾರು 4,965 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಕೋಲ್ಕತ್ತಾ ಮೆಟ್ರೋದಿಂದ ಕವಿ ಸುಭಾಷ್ ಮೆಟ್ರೋ, ಮೆಜೆರ್‌ಹತ್ ಮೆಟ್ರೋ, ಕೊಚ್ಚಿ ಮೆಟ್ರೋ, ಆಗ್ರಾ ಮೆಟ್ರೋ, ಮೀರತ್-ಆರ್‌ಆರ್‌ಟಿಸಿ ಸೆಕ್ಷನ್, ಪುಣೆ ಮೆಟ್ರೋವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಅಂಡರ್‌ವಾಟರ್ ಮೆಟ್ರೋ ಕೋಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್ ಲೇಕ್ ಅನ್ನು ಸಂಪರ್ಕಿಸುತ್ತದೆ. ಇದು ಆರು ನಿಲ್ದಾಣಗಳನ್ನು ಹೊಂದಿದ್ದು ಅವುಗಳಲ್ಲಿ ಮೂರು ಅಂಡರ್‌ಗ್ರೌಂಡ್ (ಭೂಗತ) ಆಗಿದೆ. ಹಾಗೆಯೇ 520 ಮೀಟರ್ ಪ್ರದೇಶವನ್ನು ಹೂಗ್ಲಿ ನದಿಯ ಮೂಲಕ 45 ಸೆಕೆಂಡ್‌ಗಳಲ್ಲಿ ಸಾಗಲಿದೆ.
ಪ್ರಧಾನಿ ಮೋದಿ ಶಾಲಾ ಮಕ್ಕಳೊಂದಿಗೆ ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ವಿಪಕ್ಷ ನಾಯಕ ಸುವೆಂದು ಅಧಿಕಾರಿ ಕೂಡಾ ಉಪಸ್ಥಿತರಿದ್ದರು.
ಹೌರಾ ಮೆಟ್ರೋ ನಿಲ್ದಾಣ ದೇಶದಲ್ಲಿಯೇ ಅತ್ಯಂತ ಆಳವಾದದ್ದು ಎಂದು ಹೇಳಲಾಗಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಹೂಗ್ಲಿ ನದಿಯ ನೀರೊಳಗಿನ ಸುರಂಗದ ಅಡಿಯಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರವನ್ನು 2003ರ ಏಪ್ರಿಲ್ 9ರಂದು ನಡೆಸಲಾಗಿತ್ತು. ಇಂದು ಮೆಟ್ರೋ ಮಾರ್ಗವು ಉದ್ಘಾಟನೆಯಾಗಿದೆ. ಆದರೂ, ಪ್ರಯಾಣಿಕರ ಸೇವೆ ಆರಂಭಕ್ಕೆ ಕೆಲವು ದಿನಗಳು ಬೇಕಾಗುತ್ತದೆ ಎಂದು ಮೆಟ್ರೋ ರೈಲ್ವೇ ಸಿಪಿಆರ್‌ಒ ಕೌಶಿಕ್ ಮಿತ್ರಾ ತಿಳಿಸಿದ್ದಾರೆ.