ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ವ್ಯವಸ್ಥಿತವಾದ ದಾಳಿ ನಡೆಯುತ್ತಿದ್ದು, ಮತಗಳ ಕಳವು (‘ವೋಟ್ ಚೋರಿ’) ಮತ್ತು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ತಕ್ಕ ಬೆಲೆ ತೆರಬೇಕಾಗುತ್ತದೆ. ಕಾನೂನಿನ ಎದುರು ತಲೆಬಾಗಬೇಕಾಗುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರವಾಗಿ ಎಚ್ಚರಿಸಿದ್ದಾರೆ.
ದಕ್ಷಿಣ ಗೋವಾದ ಮಾರ್ಗೋದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಗೋಯ್ ರಾಖೊಣ್ ಯಾತ್ರೆ’ (Goa Protection Yatra – ಸೇವೆ ಗೋವಾ- ಗೋವಾ ಸಂರಕ್ಷಣಾ ಯಾತ್ರೆ)ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಮಾತನಾಡಿದರು. ಕಾಂಗ್ರೆಸ್ ರಾಜ್ಯವ್ಯಾಪಿ ಪ್ರಚಾರದ ಈ ಬೃಹತ್ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ಓದಿ: ಮತಗಳವು ಗಂಭೀರ ಆರೋಪಕ್ಕೆ ರಾಹುಲ್ ಗಾಂಧಿ ಮಾತ್ರ ಉತ್ತರದಾಯಿಯೇ?
ಗೋವಾದಲ್ಲಿ ಬಿಜೆಪಿ ಸರ್ಕಾರದ 15 ವರ್ಷಗಳ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದ ಭೂಮಿ, ಸಂಪತ್ತು ಮತ್ತು ಜನಪರ ಹಕ್ಕುಗಳ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು.
ಗೋವಾದಲ್ಲಿ ಬಿಜೆಪಿ ಕಳೆದ 15 ವರ್ಷಗಳಿಂದ ಕೇವಲ ಅಧಿಕಾರ ನಡೆಸಿಲ್ಲ, ಬದಲಿಗೆ ಎಲ್ಲವನ್ನೂ ದರೋಡೆ ಮಾಡಿದೆ. ಭೂ ಕಳವು, ಹಣದ ಚೋರಿ, ಉದ್ಯೋಗಗಳ ಕಳವು, ಶಾಸಕರ ಕಳವು ಮತ್ತು ಅಂತಿಮವಾಗಿ ‘ವೋಟ್ ಚೋರಿ’ (ಮತಗಳ ಕಳವು) ನಡೆಸಿ ಗೋವಾದ ಅಸ್ಮಿತೆಗೆ ಧಕ್ಕೆ ತರಲಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಹಿಂಬಾಗಿಲಿನಿಂದ ಮತಗಳ ಕಳವು ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬೆಂಬಲದೊಂದಿಗೆ ಇದು ನಡೆಯುತ್ತಿದ್ದು, ಇವರೆಲ್ಲರೂ ತಾವು ಮಾಡಿರುವ ತಪ್ಪುಗಳಿಗೆ ಮುಂದೊಂದು ದಿನ ಕಾನೂನುಬದ್ಧ ಶಿಕ್ಷೆಯನ್ನು ಎದುರಿಸಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು.
ತಮ್ಮ ವಿರುದ್ಧ ದೇಶಾದ್ಯಂತ 45ಕ್ಕೂ ಹೆಚ್ಚು ಮಾನಹಾನಿ ಮೊಕದ್ದಮೆಗಳನ್ನು ಹೂಡಲಾಗಿದೆ. ಆದರೆ, ತಾವು ‘ವೋಟ್ ಚೋರಿ’ ಎಂದು ಬಹಿರಂಗವಾಗಿ ಆರೋಪಿಸುತ್ತಿದ್ದರೂ ಇದುವರೆಗೆ ತಮ್ಮ ಮೇಲೆ ಯಾವುದೇ ಮಾನಹಾನಿ ಮೊಕದ್ದಮೆ ದಾಖಲಿಸಲು ಕೇಂದ್ರ ಸರ್ಕಾರ ಧೈರ್ಯ ಮಾಡಿಲ್ಲ. ಇದಕ್ಕೆ ಕಾರಣ, ನ್ಯಾಯಾಲಯದ ವಿಚಾರಣೆ ನಡೆದರೆ ಅಕ್ರಮಗಳ ಅಸಲಿ ಮುಖವಾಡ ಕಳಚಿಬೀಳುತ್ತದೆ ಎಂಬ ಭೀತಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.
ಇನ್ನು “ಗೋವಾ ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ, ಇದು ಗೋವಾದ ಜನರಿಗೆ ಸೇರಿದ್ದು” ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ಮುಂಬರುವ 2027ರ ವಿಧಾನಸಭಾ ಚುನಾವಣೆಯಲ್ಲಿ ಗೋವಾದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






