ಮುಸ್ಲಿಂ ಕುಟುಂಬವೊಂದರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಕ್ರೌರ್ಯ ಮೆರೆದಿದ್ದಾರೆ. ಪೊಲೀಸ್ ದಾಳಿಯ ಸಮಯದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಒಂದು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ದುರ್ಘಟನೆ ಬಳಿಕ, ಅಲ್ವಾರ್ನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗ್ರಾಮೀಣ ನಿವಾಸದ ಹೊರಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಅಲ್ವಾರ್ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುನಾಥ್ಗಢ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಒಂದು ತಿಂಗಳ ಮಗು ಅಲಿಸಾಬಾ ಸಾವನ್ನಪ್ಪಿದ್ದಾರೆ. ಮಗುವಿನ ತಂದೆ ಇಮ್ರಾನ್ ದಿನಗೂಲಿ ಕಾರ್ಮಿಕನಾಗಿದ್ದಾರೆ. ಘಟನೆ ನಡೆದ ದಿನ ಇಮ್ರಾನ್ ಅವರ ಪತ್ನಿ ರಝಿದಾ ಖಾನ್ ಅವರು ಮಗುವಿಗೆ ಕಂಬಳಿ ಹೊದಿಸಿ ಮಲಗಿಸಿದ್ದರು. ಬೆಳ್ಳಂಬೆಳಗ್ಗೆಯೇ ಯಾವುದೇ ಸೂಚನೆಯನ್ನೂ ನೀಡದೆ ಅವರ ಮನೆಯ ಮೇಲೆ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಮಗುವಿನ ತಲೆಯನ್ನು ತುಳಿದು ಕೊಂದಿದ್ದಾರೆ ಎಂದು ರಝಿದಾ ಆರೋಪಿಸಿದ್ದಾರೆ.
“ಪೊಲೀಸರು ಇದ್ದಕ್ಕಿದ್ದಂತೆ ನಮ್ಮ ಮನೆಗೆ ನುಗ್ಗಿದರು. ನಾನು ನನ್ನ ಮಗುವಿನೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದೆ. ಪೊಲೀಸರು ನನ್ನನ್ನು ಕೊಠಡಿಯಿಂದ ಹೊರದಬ್ಬಿದರು. ನನ್ನ ಗಂಡನನ್ನು ಹೊರಗೆ ಎಳೆದೊಯ್ದರು. ನಂತರ, ಅವರು ನನ್ನ ಮಗುವಿನ ತಲೆಯನ್ನು ತುಳಿದು, ಕೊಂದರು. ನನ್ನ ಮಗುವನ್ನು ಪೊಲೀಸರು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ದೊರೆಯಬೇಕು” ಎಂದು ರಝಿದಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೌಗಾಂವ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ಗಳಾದ ಗಿರ್ಧಾರಿ ಮತ್ತು ಜಗ್ವೀರ್ ಹಾಗೂ ಕಾನ್ಸ್ಟೆಬಲ್ಗಳಾದ ಸುನಿಲ್, ರಿಷಿ ಮತ್ತು ಶಾಹಿದ್ ದಾಳಿಯಲ್ಲಿದ್ದರು ಎಂದು ವರದಿಯಾಗಿದೆ. ನ್ಯಾಯಕ್ಕಾಗಿ ಕುಟುಂಬದ ಮನವಿಯನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಲ್ವಾರ್ ಜಿಲ್ಲೆಯ ಎಸ್ಪಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.
“ಅಪರಿಚಿತ ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕುಟುಂಬಕ್ಕೆ ನ್ಯಾಯದ ಭರವಸೆ ನೀಡಲಾಗಿದೆ. ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರದೇಶ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ತೇಜ್ಪಾಲ್ ಸಿಂಗ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಇದು ಒಕ್ಕೂಟ ವ್ಯವಸ್ಥೆಯೋ ಅಥವಾ ಸರ್ವಾಧಿಕಾರಿ -ಏಕಾಕಾರಿ ವ್ಯವಸ್ಥೆಯೇ?
ಈ ಪೊಲೀಸ್ ದಾಳಿಯು ಸೈಬರ್ ಅಪರಾಧ ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳುತ್ತವೆ. ಆದಾಗ್ಯೂ, ಇಮ್ರಾನ್ ಖಾನ್ ಅವರು ಎಂದಿಗೂ ಆನ್ಲೈನ್ ವಂಚನೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. “ನನಗೂ ಸೈಬರ್ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ದಾಳಿಯ ಸಮಯದಲ್ಲಿ ಪೊಲೀಸರು ನನ್ನ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದಾರೆ. ನನ್ನ ವಿರುದ್ಧ ತಪ್ಪಾಗಿ ಆರೋಪ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ತೇಕಾ ರಾಮ್ ಜಾಲಿ ಈ ಘಟನೆಯನ್ನು ಖಂಡಿಸಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. “ಆಲ್ವಾರ್ನಲ್ಲಿ ಪೊಲೀಸರು ಸೈಬರ್ ವಂಚನೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಜಾಲಿ ಹೇಳಿದರು. “ಪೊಲೀಸರು ಸುಖಾಸುಮ್ಮನೆ ದಾಳಿಗಳನ್ನು ನಡೆಸುತ್ತಿದ್ದಾರೆ ಮತ್ತು ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ನಾನು ಈ ವಿಷಯವನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ದುಃಖಿತ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಮುಗ್ಧ ನಾಗರಿಕರಿಗೆ ಮತ್ತಷ್ಟು ಕಿರುಕುಳ ನೀಡುವುದನ್ನು ತಡೆಯಲು ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.