ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗುವ ದಂಪತಿಗಳ ಜೀವ ಮತ್ತು ಸ್ವಾತಂತ್ರ್ಯಕ್ಕೆ ನಿಜವಾಗಿಯು ಬೆದರಿಕೆ ಇಲ್ಲದಿದ್ದರೆ, ಪೊಲೀಸ್ ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ತಮ್ಮ ಬದುಕಿನಲ್ಲಿ ಸಂಬಂಧಿಕರು ಹಸ್ತಕ್ಷೇಪ ಮಾಡದಂತೆ ತಡೆಯಲು ಮತ್ತು ಪೊಲೀಸ್ ರಕ್ಷಣೆ ಕೋರಿ ದಂಪತಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ವಿಚಾರಣೆ ನಡೆಸಿದ್ದಾರೆ. ದಂಪತಿಗಳಿಗೆ ಯಾವುದೇ ಗಂಭೀರ ಬೆದರಿಕೆ ಇಲ್ಲ. ಹೀಗಾಗಿ, ದಂಪತಿಗಳಿಗೆ ಪೊಲೀಸ್ ರಕ್ಷಣೆ ಒದಗಿಸಲು ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾಗೊಳಿಸಿದ್ದಾರೆ.
‘ತಮ್ಮ ಸ್ವಂತ ಇಚ್ಛೆಯಂತೆ ಮದುವೆಯಾಗಲು ಮನೆ ತೊರೆದ ಯುವಜನರಿಗೆ ನ್ಯಾಯಾಲಯಗಳು ರಕ್ಷಣೆ ನೀಡಲು ಉದ್ದೇಶಿಸಿಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. “ಅರ್ಹ ಪ್ರಕರಣಗಳಲ್ಲಿ ಭದ್ರತೆ ನೀಡಬಹುದು. ಆದರೆ, ನಿಜವಾಗಿಯು ಯಾವುದೇ ಬೆದರಿಕೆ ಇಲ್ಲದಿದ್ದಾಗ, ದಂಪತಿಗಳು ಪರಸ್ಪರ ಒಗ್ಗಟ್ಟಾಗಿ ನಿಂತು ಸಮಾಜವನ್ನು ಎದುರಿಸಲು ಕಲಿಯಬೇಕು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಸೂಚಿಸುವ ಯಾವುದೇ ಪುರಾವೆಗಳು ನ್ಯಾಯಾಲಯಕ್ಕೆ ಕಂಡುಬಂದಿಲ್ಲ ಎಂದು ಅದು ಪ್ರಕರಣದಲ್ಲಿ ಹೇಳಿದೆ. “ಖಾಸಗಿ ಪ್ರತಿವಾದಿಗಳು [ಅರ್ಜಿದಾರರಲ್ಲಿ ಇಬ್ಬರ ಸಂಬಂಧಿಕರು] ಅರ್ಜಿದಾರರ ಮೇಲೆ ದೈಹಿಕ ಅಥವಾ ಮಾನಸಿಕ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ” ಎಂದು ನ್ಯಾಯಾಲಯ ಹೇಳಿದ್ದಾಗಿ ದಿ ಹಿಂದೂ ಉಲ್ಲೇಖಿಸಿದೆ.
ಈ ವರದಿ ಓದಿದ್ದೀರಾ?: ಭ್ರಷ್ಟಾಚಾರ ನಿಗ್ರಹಕ್ಕೆ ಸಾಂಸ್ಥಿಕ ಬದಲಾವಣೆಯೊಂದೇ ದಾರಿಯೇ?
ದಂಪತಿಗಳು ತಮ್ಮ ಸಂಬಂಧಿಕರಿಂದ ನಡೆಸಲ್ಪಟ್ಟ ದುಷ್ಕೃತ್ಯದ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದಿಷ್ಟ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಸೆಕ್ಷನ್ 175(3) ರ ಅಡಿಯಲ್ಲಿ ಪ್ರಾರಂಭಿಸಲಾದ ಯಾವುದೇ ಕ್ರಮ ಅಥವಾ ಔಪಚಾರಿಕ ಅರ್ಜಿಗೆ ಪ್ರತಿಕ್ರಿಯೆಯಾಗಿ ಪೊಲೀಸರು ಯಾವುದೇ ನಿಷ್ಕ್ರಿಯತೆ ತೋರಿಲ್ಲ. ಪೊಲೀಸರು ಎಫ್‌ಐಆರ್ ದಾಖಲಿಸಲು ಅಥವಾ ತನಿಖೆ ನಡೆಸಲು ವಿಫಲವಾದಾಗ ಸೂಕ್ಷ್ಮ ವಿಷಯವನ್ನು ತನಿಖೆ ಮಾಡಲು ಪೊಲೀಸರಿಗೆ ಆದೇಶಿಸಲು ಈ ವಿಭಾಗವು ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡುತ್ತದೆ.
ಆದಾಗ್ಯೂ, ಅರ್ಜಿದಾರರು ಉತ್ತರ ಪ್ರದೇಶದ ಚಿತ್ರಕೂಟದ ಪೊಲೀಸ್ ವರಿಷ್ಠಾಧಿಕಾರಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠ ಹೇಳಿದೆ. “ಸಂಬಂಧಪಟ್ಟ ಪೊಲೀಸರು ನಿಜವಾಗಿಯು ಬೆದರಿಕೆ ಇದೆ ಎಂದು ಗ್ರಹಿಸಿದರೆ, ಅವರು ಕಾನೂನಿನ ಪ್ರಕಾರ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ. ದಂಪತಿಗೆ ಯಾರಾದರೂ ಕಿರುಕುಳ ನೀಡಿದರೆ, ನ್ಯಾಯಾಲಯಗಳು ಮತ್ತು ಪೊಲೀಸ್ ಅಧಿಕಾರಿಗಳು ಅವರ ಸಹಾಯಕ್ಕೆ ಬರಲು ಸಿದ್ಧರಿರಬೇಕು ಎಂದು ಪೀಠ ಒತ್ತಿ ಹೇಳಿದೆ.