ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಯಾವುದೇ ರಾಜಕೀಯ ಅಥವಾ ದ್ವೇಷ ಭಾಷಣಗಳನ್ನು ಮಾಡುವಂತಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಹೇಳಿದೆ. ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ದರ್ಶನದ ನಂತರ ದೇವಾಲಯದ ಆವರಣದ ಬಳಿ ಮಾಧ್ಯಮಗಳ ಮುಂದೆ ರಾಜಕೀಯ ಮುಖಂಡರು ಸೇರಿದಂತೆ ಕೆಲವು ವ್ಯಕ್ತಿಗಳು ರಾಜಕೀಯ ಅಥವಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದು, ಆಧ್ಯಾತ್ಮಿಕ ಶಾಂತಿಗೆ ಭಂಗ ತಂದ ಘಟನೆಗಳು ಇತ್ತೀಚೆಗೆ ನಡೆದಿವೆ. ಈ ಬೆನ್ನಲ್ಲೇ ಟಿಟಿಡಿ ಹೊಸ ನಿರ್ಧಾರ ತೆಗೆದುಕೊಂಡಿದೆ. ದೇವಾಲಯದ ಆವರಣದಲ್ಲಿ ರಾಜಕೀಯ ಮತ್ತು ದ್ವೇಷ ಭಾಷಣವನ್ನು ನಿಷೇಧಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ದೇವಾಲಯಕ್ಕೆ ಬರುವ ಎಲ್ಲ ಭಕ್ತರು ಮತ್ತು ಸಂದರ್ಶಕರು ತಮ್ಮ ನಿರ್ಧಾರವನ್ನು ಗೌರವಿಸುವಂತೆ ಟಿಟಿಪಿ ಮನವಿ ಮಾಡಿದೆ. ತಿರುಮಲದ ದೈವಿಕ ಮತ್ತು ಪರಿಸರವನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಮುಂದುವರೆಸುವುದಾಗಿ ಹೇಳಿದೆ.
ಈ ನಿಯಮವು ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡಿರುವ ಉದಾಹರಣೆಗಳೂ ಇವೆ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ ಆಂಧ್ರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಎಲ್ವಿ ಸುಬ್ರಹ್ಮಣ್ಯಂ ಹೇಳಿದ್ದಾರೆ.