ನನ್ನ ಮೂರು ವರ್ಷದ ಮೊಮ್ಮಗಳು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ವಾಸಿಸುವ ಸ್ಥಳದಲ್ಲಿ ಹೆಚ್ಚು ಮಾಲಿನ್ಯ ಇರುವುದರಿಂದ ವೈದ್ಯರು ನಮಗೆ ಹೊರಗೆ ಹೋಗಲು ಹೇಳಿದ್ದಾರೆ. ಆದರೆ, ಎಲ್ಲಿಗೆ ಹೋಗುವುದು. ನಮ್ಮ ಜೀವ, ಜೀವನ, ನೆಲೆ, ಎಲ್ಲವೂ ಇಲ್ಲಿಯೇ ಇದೆ – ಇದು ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಧೋಲೇರಾ ಗ್ರಾಮದ ನಿವಾಸಿ ಜಗ್ಮಲ್ ಸಿಂಗ್ ಅವರ ವಿಷಾದದ ಮಾತುಗಳು.
ಈ ಧೋಲೆರಾ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿಗೆ ಹಲವಾರು ಗ್ರಾಮಗಳು ವಾಯು ಮಾಲಿನ್ಯದಿಂದ ಬಸವಳಿದಿವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಲ್ಲು ಪುಡಿಮಾಡುವ ಗಣಿಗಾರಿಕೆ ನಡೆಯುತ್ತಿರುವುದರಿಂದ ಗ್ರಾಮಗಳನ್ನು ಧೂಳು ಆಕ್ರಮಿಸಿಕೊಂಡಿದೆ. ಗಿಡ-ಮರಗಳು ಧೂಳಿನಿಂದ ಆವೃತವಾಗಿವೆ. ಗಾಳಿಯೂ ಬೂದು-ಕಂದು ಬಣ್ಣಕ್ಕೆ ತಿರುಗಿದೆ. ಪರಿಣಾಮ, ಹಲವಾರು ನಿವಾಸಿಗಳು ಉಸಿರಾಟದ ಕಾಯಿಲೆಗಳಾದ ಅಸ್ತಮಾ, ಸಿಲಿಕೋಸಿಸ್, ಕ್ಷಯ ಮತ್ತು ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಅಂದಹಾಗೆ, ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಚಾರದಲ್ಲಿ ಆಡಳಿತಾರೂಢ ಬಿಜೆಪಿ ಕೋಮುವಾದ, ದ್ವೇಷ ಭಾಷಣವನ್ನು ತನ್ನ ಪ್ರಮುಖ ಅಸ್ತ್ರವಾಗಿಯೇ ಬಳಸುತ್ತಿದೆ. ಉಳಿದ ಪಕ್ಷಗಳು, ನಿರುದ್ಯೋಗ, ಯುವಜನರ ಸಮಸ್ಯೆ, ರೈತ ಹೋರಾಟ-ಎಂಎಸ್‌ಪಿ, ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿವೆ. ಆದರೆ, ಯಾರೊಬ್ಬರೂ ರಾಜ್ಯವನ್ನು ಕಾಡುತ್ತಿರುವ ಮಾಲಿನ್ಯದ ಬಗ್ಗೆ ಮಾತನಾಡುತ್ತಿಲ್ಲ.
ಹರಿಯಾಣವು ಎದುರಿಸುತ್ತಿರುವ ಮಾಲಿನ್ಯ ಬಿಕ್ಕಟ್ಟಿಗೆ ಧೋಲೇರಾ ಗ್ರಾಮ ಪ್ರತಿನಿಧಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಿರುವ ಹರಿಯಾಣದಲ್ಲಿ ಅತಿಯಾದ ಅರಣ್ಯನಾಶ, ನೀರಿನ ಸವಕಳಿ ಮತ್ತು ಮಾಲಿನ್ಯ, ಭೂಮಿಯ ಅವನತಿ, ಹವಾಮಾನ ನಿರ್ವಹಣೆಗೆ ಅಗತ್ಯ ಯೋಜನೆಯ ಕೊರತೆ ಹಾಗೂ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಸಮಸ್ಯೆ ಹೇರಳವಾಗಿ ಕಾಡುತ್ತಿದೆ.
ಪ್ರಪಂಚದ 50 ಅತ್ಯಂತ ಕಲುಷಿತ ನಗರಗಳಲ್ಲಿ ಎಂಟು ಹರಿಯಾಣದಲ್ಲಿದೆ. ಇದರಲ್ಲಿ ಹೆಚ್ಚಿನವು ವಾಹನಗಳ ಹೊರಸೂಸುವಿಕೆ, ಕೈಗಾರಿಕಾ ಚಟುವಟಿಕೆಗಳು ಮತ್ತು ತ್ಯಾಜ್ಯ ಸುಡುವಿಕೆಯಿಂದ ಮಾಲಿನ್ಯ ಪೀಡಿತವಾಗಿವೆ.
ಗಮನಾರ್ಹವಾಗಿ, ಹರಿಯಾಣವು ಭಾರತದಲ್ಲಿನ ಒಟ್ಟು ಅರಣ್ಯದಲ್ಲಿ ಕೇವಲ 3.6% ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ 21%ಗೆ ಹೋಲಿಸಿದರೆ, ಅಜಗಜಾಂತರ ದೂರದಲ್ಲಿದೆ. ಹರಿಯಾಣದ ಅರಾವಳಿ ಮತ್ತು ಶಿವಾಲಿಕ್ ಬೆಟ್ಟಗಳಲ್ಲಿನ ಅರಣ್ಯನಾಶವು ನೀರಿನ ಕೊರತೆ, ಗಾಳಿಯ ಗುಣಮಟ್ಟ ಹಾಗೂ ಜೀವವೈವಿಧ್ಯತೆಯನ್ನು ಹದಗೆಡಿಸಿದೆ. ಅರಾವಳಿ ಬೆಟ್ಟಗಳಲ್ಲಿ ಪರವಾನಗಿ ಪಡೆದ ಮತ್ತು ಅಕ್ರಮ ಗಣಿಗಾರಿಕೆಯು ಹೆಗ್ಗಿಲ್ಲದೆ ನಡೆಯುತ್ತಿದ್ದು, ಅಂತರ್ಜಲ ಮರುಪೂರಣವನ್ನು ಮತ್ತಷ್ಟು ಕಡಿಮೆ ಮಾಡುತ್ತಿದೆ. ನೈಸರ್ಗಿಕ ಆವಾಸಸ್ಥಾನಗಳಿಗೆ ಹಾನಿ ಮಡಿದೆ.
ಜೊತೆಗೆ, ಕಳಪೆ ತ್ಯಾಜ್ಯ ನಿರ್ವಹಣೆಯು ಹರಿಯಾಣದ ಮತ್ತೊಂದು ಮಹತ್ವದ ಸವಾಲಾಗಿದೆ. ಬಂಧ್ವಾರಿಯಂತಹ ವಿಷಕಾರಿ ಭೂಕುಸಿತಗಳು ಮಣ್ಣು ಮತ್ತು ನೀರಿನ ಮಾಲಿನ್ಯಕ್ಕೆ ಹೆಚ್ಚಿನ ಕಾರಣವಾಗಿವೆ. ಅಲ್ಲದೆ, ನೆರೆಯ ರಾಜ್ಯಗಳ ಕೈಗಾರಿಕಾ ತ್ಯಾಜ್ಯವನ್ನೂ ಹರಿಯಾಣದ ಗ್ರಾಮೀಣ ಪ್ರದೇಶಗಳಿಗೆ ಸುರಿಯಲಾಗುತ್ತಿದ್ದು, ಕೃಷಿ ಭೂಮಿ ಕಲುಷಿತಗೊಳ್ಳುತ್ತಿದೆ.
ಹೋರಾಟ ನಡೆಸುತ್ತಲೇ ಇದ್ದಾರೆ ಜನರು
ಮಹೇಂದ್ರಗಢದ ಧೋಲೇರಾ ಗ್ರಾಮದಲ್ಲಿ, ಗ್ರಾಮದ ಪರಿಧಿಯಲ್ಲಿಯೇ ಸುಮಾರು 40 ಕಲ್ಲು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ, ಹೆಚ್ಚಿನವು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2014-15ರಲ್ಲಿ ಹುಟ್ಟುಕೊಂಡಿವೆ. ಹೆಗ್ಗಿಲ್ಲದೆ, ಗಣಿಗಾರಿಕೆ ನಡೆಸುತ್ತಿವೆ.
ಗ್ರಾಮದಲ್ಲಿನ ಮಾಲಿನ್ಯವು ಅತ್ಯಂತ ಕೆಟ್ಟದಾಗಿದೆ. ಇದು ಜನರನ್ನು ವಲಸೆ ಹೋಗುವಂತೆ ಮಾಡಿದೆ. “ಗ್ರಾಮದಲ್ಲಿನ 1,100 ಕುಟುಂಬಗಳಲ್ಲಿ ಸುಮಾರು 80-90 ಕುಟುಂಬಗಳು ಇತ್ತೀಚೆಗೆ ಗ್ರಾಮ ತೊರೆದು ವಲಸೆ ಹೋಗಿದ್ದಾರೆ. ಗ್ರಾಮ ತೊರೆಯಲು ಸಾಧ್ಯವಾಗದವರು, ಬೇರೆಡೆ ಬದುಕು ಕಟ್ಟಿಕೊಳ್ಳಲಾಗದವರು ಉಳಿದಿದ್ದಾರೆ. ಸಂಬಂಧಿಗಳೂ ಕೂಡ ಧೂಳಿಗೆ ಹೆದರಿ ಗ್ರಾಮಕ್ಕೆ ಬರುತ್ತಿಲ್ಲ. ಅವರೆಲ್ಲರೂ ನಮ್ಮಿಂದ ದೂರ ಉಳಿದಿದ್ದಾರೆ. ಮಾಲಿನ್ಯದಿಂದಾಗಿ ಬೆಳೆ ಇಳುವರಿಯೂ ಗಣಮನೀಯವಾಗಿ ಕುಸಿತ ಕಂಡಿದೆ” ಎಂದು ಜಗ್ಮಲ್ ಸಿಂಗ್ ಹೇಳಿದ್ದಾರೆ.
ಪಕ್ಕದ ಖತೋಲಿ ಜಟ್ ಗ್ರಾಮದಲ್ಲಿ, 2013ರಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಆವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಮಂಜೂರು ಮಾಡಲಾಗಿದೆ. ಆದರೆ, ಆ ಭೂಮಿಯ ಪಕ್ಕದಲ್ಲಿಯೇ ಕಲ್ಲು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಜಮೀನಿನಲ್ಲಿ 60 ಮನೆಗಳಿದ್ದು, ಸುಮಾರು 200 ಜನರು ವಾಸಿಸುತ್ತಿದ್ದಾರೆ.
ಕಲ್ಲು ಕ್ರಷರ್‌ಗಳ ಕಾರ್ಯಾಚರಣೆಯನ್ನು ವಿರೋಧಿಸಿ ಎರಡೂ ಗ್ರಾಮಗಳ ನಿವಾಸಿಗಳು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಪರಿಹಾರಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ಕಲ್ಲು ಕ್ರಷರ್‌ಗಳ ಮಾಲೀಕರು ತಮ್ಮ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಲಂಚ ನೀಡುತ್ತಿದ್ದಾರೆ. ಪ್ರತಿ ತಿಂಗಳು 3ರಿಂದ 4 ಕೋಟಿ ರೂಪಾಯಿ ಲಂಚ ಅಧಿಕಾರಿಗಳು, ರಾಜಕಾರಣಿಗಳ ಕೈಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಂಜು ಚೌಧರಿ ಅವರು ಕ್ರಷರ್‌ಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಎರಡು ಬಾರಿ ಬಿಜೆಪಿ ಶಾಸಕರಾಗಿರುವ ಅಭೆ ಸಿಂಗ್ ಯಾದವ್ ಅವರು ಮಾಲಿನ್ಯ ಸಮಸ್ಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚುನಾವಣಾ ಪ್ರಚಾರದಲ್ಲೂ ಈ ಬಗ್ಗೆ ಮಾತನಾಡುತ್ತಿಲ್ಲ.
ಇದೆಲ್ಲದೆ, ನುಹ್ ಜಿಲ್ಲೆಯ ಸೋಹ್ನಾ ವಿಧಾನಸಭಾ ಕ್ಷೇತ್ರದ ಖೋರಿ ಖುರ್ದ್ ಗ್ರಾಮದಲ್ಲಿಯೂ ಮಾಲಿನ್ಯದ ಸಮಸ್ಯೆ ಹೇರಳವಾಗಿದೆ. ರಾಜಸ್ಥಾನದ ಕೈಗಾರಿಕಾ ನಗರವಾದ ಭಿವಾಡಿಯಿಂದ ತಮ್ಮೂರಿಗೆ ಕೈಗಾರಿಕಾ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದ, ತಮ್ಮ ಗ್ರಾಮದ ಭೂಮಿ, ಗಾಳಿ ಮತ್ತು ನೀರು ಮಾಲಿನ್ಯವಾಗುತ್ತಿದೆ ಎಂದು ಖೋರಿ ಗ್ರಾಮದ ಜನರು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ರಾಹುಲ್‌ಗೆ ಅವಕಾಶ ಮಾತ್ರವಲ್ಲ, ಎಚ್ಚರಿಕೆಯೂ ಇದೆ
ಗ್ರಾಮದಲ್ಲಿಯೂ ಕೈಗಾರಿಕಾ ತ್ಯಾಜ್ಯ ಸುರಿಯುವ ಮತ್ತು ಸುಡುವುದರ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಮೀಮ್ ಅಹ್ಮದ್ ಪ್ರಕಾರ, “ತ್ಯಾಜ್ಯವನ್ನು ಉತ್ಪಾದಿಸುವ ಕಾರ್ಖಾನೆಗಳು ಕೆಲವು ಕುಟುಂಬಗಳಿಗೆ ಹೆಚ್ಚಿನ ಹಣ ಕೊಟ್ಟು, ತ್ಯಾಜ್ಯವನ್ನು ಸುರಿಯುತ್ತಿವೆ ಮತ್ತು ಸುಟ್ಟುಹಾಕುತ್ತಿವೆ. ಸುಡುವ ತ್ಯಾಜ್ಯದ ಹೊಗೆ ಗ್ರಾಮದ ನಿವಾಸಿಗಳಿಗೆ ಉಸಿರಾಟದ ತೊಂದರೆ ಮತ್ತು ಚರ್ಮ ರೋಗಗಳಿಗೆ ಕಾರಣವಾಗುತ್ತಿದೆ” ಎಂದು ಹೇಳಿದ್ದಾರೆ.
2016 ಮತ್ತು 2023ರಲ್ಲಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಮುಚ್ಚಿ ಆದೇಶ ಹೊರಡಿಸಲಾಗಿತ್ತು. ಆದರೆ, ಆ ಆದೇಶ ಕಾಗದಕ್ಕಷ್ಟೇ ಸೀಮಿತವಾಗಿದೆ. ಎಲ್ಲ ಪರಿಸರ ಮಾನದಂಡಗಳನ್ನು ಉಲ್ಲಂಘಿಸಿ ಆ ಘಟಕಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಅಹ್ಮದ್ ಆರೋಪಿಸಿದ್ದಾರೆ.
ಮಾಲಿನ್ಯ ಸಮಸ್ಯೆಯ ಬಗ್ಗೆ ಗ್ರಾಮದ ನಿವಾಸಿಗಳು ತಮ್ಮ ಶಾಸಕ ಬಿಜೆಪಿಯ ಸಂಜಯ್ ಸಿಂಗ್ ಅವರ ಬಳಿ ಪ್ರಸ್ತಾಪಿಸಿದ್ದಾರೆ. ಆದರೆ, ಶಾಸಕರು ಪರಿಶೀಲಿಸುವ ಭರವಸೆ ನೀಡುವುದನ್ನೂ ಬಿಟ್ಟು ಬೇರೇನನ್ನೂ ಮಾಡಿಲ್ಲವೆಂದು ದೂರಿದ್ದಾರೆ.
ಮಾಲಿನ್ಯದ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡೆ
ಕಾಂಗ್ರೆಸ್ ಅಥವಾ ಬಿಜೆಪಿ ತಮ್ಮ ಪ್ರಣಾಳಿಕೆಗಳಲ್ಲಿ ಮಾಲಿನ್ಯವನ್ನು ಪ್ರಮುಖ ಸಮಸ್ಯೆಯಾಗಿ ಪರಿಗಣಿಸಿಲ್ಲ. ತಮ್ಮ ಪ್ರಚಾರ ಭಾಷಣಗಳಲ್ಲಿ ರಾಜಕಾರಣಿಗಳು ಮಾಲಿನ್ಯ ಸಮಸ್ಯೆಯ ಕುರಿತು ಮಾತನಾಡುವುದಿಲ್ಲ.
ಮಾಲಿನ್ಯದ ಬಗ್ಗೆ ಗಮನ ಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಮೋಹನ್ ಲಾಲ್ ಬಡೋಲಿ ನಿರಾಕರಿಸಿದ್ದಾರೆ. “ನಮ್ಮ ಎಲ್ಲ ನಾಯಕರು ಸ್ವಚ್ಛತಾ ಅಭಿಯಾನಕ್ಕೆ ನಿಷ್ಠರಾಗಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಎಎಪಿ ರಾಜ್ಯಾಧ್ಯಕ್ಷ ಸುಶೀಲ್ ಗುಪ್ತಾ, “ರಾಜ್ಯದಲ್ಲಿ ಮಾಲಿನ್ಯವು ಒಂದು ಪ್ರಮುಖ ಸವಾಲಾಗಿದೆ. ಆದರೆ ಹರಿಯಾಣದ ಜನರು ಮಾಲಿನ್ಯದ ಆಧಾರದ ಮೇಲೆ ಮತ ಚಲಾಯಿಸುವುದಿಲ್ಲ. ರಾಜಕಾರಣಿಗಳು ಅವರಿಗೆ ಮತಗಳನ್ನು ತರುವ ಸಮಸ್ಯೆಗಳ ಮಾತ್ರ ಮಾತನಾಡುತ್ತಾರೆ” ಎಂದಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಮತದಾರರು ಜಾಗೃತರಾಗಿಲ್ಲ ಎಂದು ಹರಿಯಾಣ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸದಸ್ಯ ಧೀರಜ್ ಗಾಬಾ ಹೇಳಿದ್ದಾರೆ. “ಮಾಲಿನ್ಯವನ್ನು ಚುನಾವಣಾ ವಿಷಯವನ್ನಾಗಿ ಮಾಡಲು ಜನಾಂದೋಲನ ಮತ್ತು ಸಾರ್ವಜನಿಕ ಒತ್ತಡದ ಅಗತ್ಯವಿದೆ” ಎಂದು ಹೇಳಿದ್ದಾರೆ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ