ವಿಜ್ಞಾನವು ಮುಂದುವರಿದಿದ್ದು, ಪುರುಷತ್ವ ಪರೀಕ್ಷೆಗೆ ವೀರ್ಯ ಮಾದರಿಗಳನ್ನು ಸಂಗ್ರಹಿಸುವ ಬದಲು ಆರೋಪಿಯ ರಕ್ತದ ಮಾದರಿಯನ್ನು ಬಳಸಿಕೊಂಡು ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ರೂಪಿಸಿ ಪರೀಕ್ಷಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ಸ್ತ್ರೀಯರಿಗೆ ಎರಡು ಬೆರಳಿನ ಪರೀಕ್ಷೆಯನ್ನು ಸ್ಥಗಿತಗೊಳಿಸುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಕೋರ್ಟ್ ಒತ್ತಿ ಹೇಳಿತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಅನುಷ್ಠಾನದ ಮೇಲೆ ನಿಗಾ ವಹಿಸಲು ವಿಶೇಷವಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಎನ್ ಆನಂದ್ ವೆಂಕಟೇಶ್ ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜುಲೈ 7 ರಂದು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟ್ ಪೀಠವು ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ಒಳಗೊಂಡ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸುತ್ತಿದೆ.
“ಎರಡು ಬೆರಳಿನ ಪರೀಕ್ಷೆ ಮತ್ತು ಪುರಾತನವಾದ ಪುರುಷತ್ವ ಸಾಮರ್ಥ್ಯ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಈ ಬಗ್ಗೆ ವಿವಿಧ ವಲಯಗಳ ಪೊಲೀಸ್ ಮಹಾನಿರೀಕ್ಷಕರಿಗೆ ಸೂಚನೆ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನವಿದೆ. ಜನವರಿ 1, 2023 ರಿಂದ ಪ್ರಾರಂಭವಾಗುವ ಎಲ್ಲ ಪ್ರಕರಣಗಳಲ್ಲಿ ಲೈಂಗಿಕ ಅಪರಾಧಗಳನ್ನು ಒಳಗೊಂಡು ವೈದ್ಯಕೀಯ ವರದಿಗಳನ್ನು ತಯಾರಿಸಲಾಗುತ್ತದೆಯೆ ಮತ್ತು ನೀಡಲಾದ ಯಾವುದೇ ವರದಿಯು ಎರಡು ಬೆರಳಿನ ಪರೀಕ್ಷೆಯನ್ನು ಉಲ್ಲೇಖಿಸುತ್ತದೆಯೇ ಎಂದು ಪರಿಶೀಲಿಸಿ” ಎಂದು ಕೋರ್ಟ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಇಡಿ ಮುಖ್ಯಸ್ಥ ಸಂಜಯ್ ಮಿಶ್ರಾ ಸೇವಾ ವಿಸ್ತರಣೆ ಕಾನೂನುಬಾಹಿರ ಎಂದ ಸುಪ್ರೀಂ ಕೋರ್ಟ್
“ಅಂತೆಯೇ, ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಪುರುಷತ್ವ ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಆರೋಪಿಯಿಂದ ವೀರ್ಯವನ್ನು ಸಂಗ್ರಹಿಸಲಾಗುತ್ತದೆ. ಇದು ಹಳೆಯ ವಿಧಾನವಾಗಿದೆ. ಈಗ ವಿಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ. ಪುರುಷತ್ವ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಪುರುಷತ್ವ ಪರೀಕ್ಷೆ ಮಾಡಲು ಸಾಧ್ಯವಿದೆ. ಇಂತಹ ಸುಧಾರಿತ ತಂತ್ರಗಳನ್ನು ವಿಶ್ವದಾದ್ಯಂತ ಅನುಸರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಕೂಡ ಈ ತಂತ್ರವನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ರೂಪಿಸಬೇಕು’ ಎಂದು ನ್ಯಾಯಪೀಠವು ನಿರ್ದೇಶನ ನೀಡಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ 11ಕ್ಕೆ ಮುಂದೂಡಿತು.