ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದು ಮೂರು ದಿನಗಳು ಕಳೆದಿವೆ. ಜಮ್ಮು-ಕಾಶ್ಮೀರದ ಪಕ್ಷಗಳು, ಸಂಘಟನೆಗಳು ಘಟನೆಯನ್ನು ಖಂಡಿಸಿ ಕಾಶ್ಮೀರ ಬಂದ್ ನಡೆಸಿವೆ. ಪಹಲ್ಗಾಮ್‌ನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಲೋಪಗಳ ಬಗ್ಗೆ ಪ್ರಶ್ನೆಗಳನ್ನೂ ಎತ್ತಿವೆ. ಕೇಂದ್ರ ಸರ್ಕಾರವು ಕೂಡ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿರುವ ಬಗ್ಗೆ ಸರ್ವಪಕ್ಷಗಳ ಸಭೆ ನಡೆಸಿದೆ. ಆದರೆ, ಗಂಭೀರ ವಿಚಾರವನ್ನು ಚರ್ಚಿಸಬೇಕಿದ್ದ ಈ ತುರ್ತು ಮತ್ತು ಪ್ರಮುಖ ಸಭೆಯಲ್ಲಿ ಪ್ರಧಾನಿ ಮೋದಿ ಅವರೇ ಭಾಗವಹಿಸಿರಲಿಲ್ಲ. ಸಭೆಯಲ್ಲಿ ಅವರ ಗೈರು ಹಾಜರಿಯು ವಿರೋಧ, ಆಕ್ರೋಶ, ಪ್ರಶ್ನೆಗಳಿಗೆ ಗುರಿಯಾಗಿದೆ.
ಸರ್ವಪಕ್ಷಗಳ ಸಭೆಯಲ್ಲಿಯೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಮೋದಿ ಗೈರು ಹಾಜರಿಯ ಬಗ್ಗೆ ಪ್ರಶ್ನಿಸಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡಿದ್ದೇವೆಂದು ಗೃಹ ಸಚಿವ ಅಮಿತ್ ಶಾ ಅಬ್ಬರದ ಭಾಷಣ ಮಾಡಿದ್ದರು. ಅವರ ಭಾಷಣದ ಆರೇ ತಿಂಗಳ ಅಂತರದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ದಾಳಿ ನಡೆದಿದೆ.
ಮಂಗಳವಾರ, ನಡು ಮಧ್ಯಾಹ್ನದ ಸಮಯದಲ್ಲಿ ಪಹಲ್ಗಾಮ್‌ಗೆ ನುಗ್ಗಿದ್ದ ಭಯೋತ್ಪಾದಕರು ಹಲವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸ್ಥಳೀಯರೂ ಸೇರಿದಂತೆ 28 ಮಂದಿ ಮೃತಪಟ್ಟಿದ್ದಾರೆ. ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕರ ಬಂದೂಕು ಕಿತ್ತುಕೊಳ್ಳಲು ಹೋದ ಕುದುರೆ ಸವಾರ ಆದಿಲ್ ಹುಸೇನ್ ತನ್ನ ಜೀವ ತೆತ್ತಿದ್ದಾರೆ.
ಇಡೀ ದೇಶವೇ ಭಯೋತ್ಪಾದಕ ದಾಳಿಯ ವಿರುದ್ಧ ಆಕ್ರೋಶಗೊಂಡಿದೆ. ದಾಳಿಯಲ್ಲಿ ಮೃತಪಟ್ಟಿವರಿಗಾಗಿ ಮರುಕ ವ್ಯಕ್ತಪಡಿಸಿದೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳಿಗೆ ಆಗ್ರಹಿಸಿದ್ದಾರೆ. ಅಂತೆಯೇ, ಭದ್ರತಾ ಲೋಪಗಳ ಬಗ್ಗೆಯೂ ಪ್ರಶ್ನಿಸುತ್ತಿದ್ದಾರೆ.
ದೇಶದ ಜನರನ್ನು ಕೊಂದ ಭಯೋತ್ಪಾದನೆ ಮತ್ತು ಅದರ ನಿಗ್ರಹದಂತಹ ಗಂಭೀರ ವಿಚಾರಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಭಯೋತ್ಪಾದನೆಯನ್ನು ಎದುರಿಸಲು ಸರ್ಕಾರದ ಜೊತೆಗಿರುತ್ತೇವೆಂದು ವಿಪಕ್ಷಗಳು ಹೇಳಿದ್ದವು. ಮಾತ್ರವಲ್ಲ, ಅಗತ್ಯವಾದ ಚರ್ಚೆಗಾಗಿ ಸರ್ವಪಕ್ಷಗಳ ಸಭೆ ಕರೆಯುವಂತೆ ಒತ್ತಾಯಿಸಿದ್ದವು. ವಿಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಗುರುವಾರ ನಡೆಸಿದೆ.
ಆದರೆ, ಸಭೆಯಲ್ಲಿ ಮುಖ್ಯವಾಗಿ ಭಾಗಿಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಭಾಗಿಯಾಗಿರಲಿಲ್ಲ. ಬದಲಾಗಿ, ಮೋದಿ ಅವರು ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿನ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಾಳಿಯಂತಹ ಗಂಭೀರ ಸಂದರ್ಭದಲ್ಲಿ ಭಾಗಿಯಾಗಬೇಕಿರಲಿಲ್ಲ. ಅದು ಸರ್ವಪಕ್ಷಗಳ ಸಭೆಗಿಂತ ಮುಖ್ಯವಾದ ಕಾರ್ಯಕ್ರಮವಲ್ಲ. ಆದರೂ ಮೋದಿ ಭಾಗಿಯಾಗುತ್ತಾರೆಂದರೆ- ಅವರಿಗೆ ದೇಶ, ದೇಶದ ಜನರು, ದೇಶದ ಭದ್ರತೆಗಿಂತ ಚುನಾವಣೆ ಮುಖ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅಂದಹಾಗೆ, ದೇಶದ ಭದ್ರತೆ ಮತ್ತು ಭಯೋತ್ಪಾದಕ ದಾಳಿಯಂತಹ ಗಂಭೀರ ವಿಚಾರಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪ್ರಧಾನಿಗೆ ಮಾತ್ರವೆ ಇರುತ್ತದೆ. ಇಂತಹದೊಂದು ಭೀಕರ ಘಟನೆಯ ಬಗ್ಗೆ ನಡೆದ ಸರ್ವಪಕ್ಷಗಳು ಒಮ್ಮತದಿಂದ ಭಾಗಿಯಾದ ಸಭೆಗೆ ಪ್ರಧಾನಿಗಳು ಬರಲಿಲ್ಲವೆಂದರೆ- ಅವರ ಆದ್ಯತೆಗಳೇನು ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಪೂರಕವಾಗಿ ವಿಪಕ್ಷಗಳು, ‘ಪ್ರಧಾನಿ ಮೋದಿಯವರಿಗೆ ದೇಶದ ಜನರ ಬಗ್ಗೆ ಸಹಾನುಭೂತಿ ಇಲ್ಲ’ ಎಂದು ದೂರುವುದು ಸಹಜವಾಗಿಯೇ ಇದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಾಗುತ್ತದೆ’ ಎಂದು ಹೇಳಿದ್ದಾರೆ. ಆದರೆ, ಚರ್ಚೆಯನ್ನು ಖುದ್ದು ಆಲಿಸುವುದಕ್ಕೂ, ಸಭೆಯ ಸಂಕ್ಷಿಪ್ತ ಮಾಹಿತಿ ಪಡೆಯುವುದಕ್ಕೂ ವ್ಯತ್ಯಾಸವಿದೆ ಎಂದು ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಈ ವರದಿ ಓದಿದ್ದೀರಾ?: ‘ಸಂಸತ್ತು ಸರ್ವೋಚ್ಚ’ ಎಂದಿದ್ದಾರೆ ಧನಕರ್; ನಿಜಕ್ಕೂ ಯಾವುದು ಶ್ರೇಷ್ಠ ಮತ್ತು ಸರ್ವೋಚ್ಚ?
ಭಯೋತ್ಪಾದನೆಯಂತಹ ಗಂಭೀರ ವಿಚಾರಗಳ ಕುರಿತು ಚರ್ಚಿಸಿ, ಎದುರಿಸಲು ಬೇಕಾದ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪ್ರಧಾನಿ ಮಾತ್ರವೇ ಇರುತ್ತದೆ. ಭಯೋತ್ಪಾದಕ ಕೃತ್ಯದ ವಿರುದ್ಧ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಕೂಡ ಪ್ರಧಾನಿಯೇ ಆಗಿರುತ್ತಾರೆ. ಭದ್ರತಾ ಲೋಪಗಳು ಮತ್ತು ಗುಪ್ತಚರ ವೈಫಲ್ಯದ ಕುರಿತು ಪ್ರಧಾನಿ ಪ್ರತಿಕ್ರಿಯೆಯೂ ಮುಖ್ಯವಾಗಿರುತ್ತದೆ. ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು ಕೂಡ ಅತ್ಯಂತ ಅವಶ್ಯಕ.
ಹೀಗಿರುವಾಗ, ಇಂತಹ ಸಂದರ್ಭದಲ್ಲಿ ಮೋದಿ ಅವರು ಸರ್ವಪಕ್ಷಗಳ ಸಭೆಯಲ್ಲಿ ಹಾಜರಾಗದೆ ಬಿಹಾರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಎಷ್ಟು ಸರಿ?
ಇದೇ ಅಕ್ಟೊಬರ್ ಅಥವಾ ನವೆಂಬರ್‌ನಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿದೆ. ಈ ಬಾರಿಯೂ ಅಧಿಕಾರವನ್ನು ಉಳಿಸಿಕೊಳ್ಳಬೇಕು. ಸಾಧ್ಯವಾದರೆ, ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಸರ್ಕಾರದಲ್ಲಿ ತಮ್ಮದೇ ಮೇಲುಗೈ ಸಾಧಿಸಬೇಕು ಎಂದು ಬಿಜೆಪಿ ಹವಣಿಸುತ್ತಿದೆ.
ಹೀಗಾಗಿಯೇ, ಭಯೋತ್ಪಾದಕ ದಾಳಿ, ದೇಶದ ಭದ್ರತೆಯಂತಹ ಗಂಭೀರ, ಗಮನಾರ್ಹ ವಿಷಯಗಳ ಬಗ್ಗೆ ಎಲ್ಲ ಪಕ್ಷಗಳು ಒಂದೆಡೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲೂ ಮೋದಿ ಅವರು ಸಭೆಗೆ ಹಾಜರಾಗಲಿಲ್ಲ. ಮೋದಿ ಮಾತ್ರವಲ್ಲ, ಬಿಹಾರದ ಅವರ ಮಿತ್ರಪಕ್ಷ ಜೆಡಿಯು ನಾಯಕರು ಕೂಡ ಸಭೆಗೆ ಬರಲಿಲ್ಲ. ಮೋದಿ ಬಿಹಾರದಲ್ಲಿದ್ದ ಕಾರಣ, ಜೆಡಿಯು ನಾಯಕರು ಸರ್ವಪಕ್ಷ ಸಭೆಗೆ ಬರಲಿಲ್ಲ ಎಂದು ಹೇಳಲಾಗಿದೆ.
ಆದಾಗ್ಯೂ, ಬಿಹಾರದ ಮಧುಬನಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸುಮಾರು 13,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಇಂಗ್ಲಿಷ್‌ನಲ್ಲಿ ಅಬ್ಬರ ಭಾಷಣ ಮಾಡಿದ ಮೋದಿ, ”ಭಯೋತ್ಪಾದಕರಿಗೆ ಕಲ್ಪನೆಗೂ ಮೀರಿದ ಶಿಕ್ಷೆ ನೀಡಲಾಗುತ್ತದೆ. ಭಯೋತ್ಪಾದನೆಯಿಂದ ಭಾರತದ ಅಂತಃಶಕ್ತಿ ಎಂದೂ ಮುರಿದು ಬಿದ್ದಿಲ್ಲ. ಇಂದು ಬಿಹಾರದ ಮಣ್ಣಿನಿಂದ ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಆತನ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುತ್ತದೆ. ಭೂಮಿಯ ಕೊನೆಯವರೆಗೂ ಎಲ್ಲೇ ಹೋದರೂ ಅವರನ್ನು ಬಿಡುವುದಿಲ್ಲ” ಎಂದು ಅಬ್ಬರಿಸಿದರು.
ಅಂದರೆ, ಇಂತಹ ಅಬ್ಬರದ ಭಾಷಣ ಮಾಡುವುದು ಅವರಿಗೆ ಮುಖ್ಯವಾಗಿದೆ. ಆ ಮೂಲಕ ಪ್ರಪಂಚಕ್ಕೆ ಸಂದೇಶ ರವಾನಿಸಬೇಕಾಗಿದೆ. ಅಷ್ಟೇ ಅವರ ಉದ್ದೇಶವಾಗಿದೆ.
ಮೋದಿ ಅವರಿಗೆ ಎಲ್ಲವನ್ನೂ ಮಾಹಿತಿ ಕೊಡಲಾಗುತ್ತದೆ ಎಂದಿರುವ ರಾಜ್‌ನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ”ವಿಷಯವನ್ನು ವಿವರಿಸುವುದು ಬೇರೆ, ವಿಷಯಗಳನ್ನು ನೇರವಾಗಿ ಕೇಳುವ ಮೂಲಕ ನಿರ್ಧಾರ ತೆಗೆದುಕೊಳ್ಳುವುದು ಬೇರೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ
ಸಭೆಯಲ್ಲಿ ಮೋದಿ ಅನುಪಸ್ಥಿತಿಯ ಹೊರತಾಗಿಯೂ ವಿಪಕ್ಷಗಳು ಹಲವಾರು ಪ್ರಶ್ನೆಗಳನ್ನು ಎತ್ತಿವೆ. ”ಕಾಶ್ಮೀರದಲ್ಲಿ ಮೂರು ಹಂತದ ಭದ್ರತೆ ಇದೆ. ಅದರ ಹೊರತಾಗಿಯೂ, ಅಂತಹ ಲೋಪ ಹೇಗೆ ಸಂಭವಿಸಿತು. ಬಹಳಷ್ಟು ಅಮಾಯಕರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಪ್ರದೇಶವು ಮುಖ್ಯ ರಸ್ತೆಯಲ್ಲಿಲ್ಲ. ನೀವು ನಡೆದುಕೊಂಡು ಹೋಗಬೇಕು ಅಥವಾ ಕುದುರೆಯ ಮೂಲಕ ಹೋಗಬೇಕು. ಇಂತಹ ಪರಿಸ್ಥಿತಿಯಲ್ಲೂ ಪಹಲ್ಗಾಮ್‌ನಲ್ಲಿ ದಾಳಿ ನಡೆದಿರುವುದರಲ್ಲಿ ಭದ್ರತಾ ಲೋಪಗಳು ಮತ್ತು ಗುಪ್ತಚರ ವೈಫಲ್ಯಗಳು ಪ್ರಮುಖವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
ಇದೆಲ್ಲದರ ಹೊರತಾಗಿಯೂ, ಪಹಲ್ಗಾಮ್‌ನಲ್ಲಿ ಘಟನೆ ನಡೆದ ಬೈಸರನ್ ಕಣಿವೆ ಪ್ರದೇಶವನ್ನು ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಪ್ರವಾಸಿಗರಿಗಾಗಿ ತೆರೆಯಲಾಗುತ್ತದೆ. ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ಯುವಾಗ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ. ಆದರೆ, ಏಪ್ರಿಲ್ 20ರಂದೇ ಆ ತಾಣವನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳಿಗೆ ತಿಳಿಸದೆಯೇ ಪ್ರವಾಸಿಗಳ ಸಣ್ಣ ಬ್ಯಾಚ್‌ಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಪಹಲ್ಗಾಮ್ ಸೂಕ್ಷ್ಮ ಪ್ರದೇಶವಾಗಿದ್ದು, ಅಮರನಾಥ ಯಾತ್ರೆಯ ಸಮಯದಲ್ಲಿ ಹೆಚ್ಚಿನ ಭದ್ರತೆ ಇದ್ದಾಗ ಮಾತ್ರ ತೆರೆಯಲಾಗುವುದು ಎಂದಾದರೆ, ಏಪ್ರಿಲ್ 20ರಂದು ಯಾರಿಗೂ ತಿಳಿಯದಂತೆ ಈ ಪ್ರದೇಶವನ್ನು ತೆರೆದಿದ್ದು ಯಾಕೆ? ಇದು ಕ್ಷುಲ್ಲಕ ವಿಷಯವೇ? ಯಾರಿಗೂ ತಿಳಿಯದೆ 500-1,000 ಜನರು ಅಲ್ಲಿಗೆ ಹೇಗೆ ತಲುಪಿದರು? ಈ ಪ್ರದೇಶವು ಏಪ್ರಿಲ್ 20ರಂದೇ ತೆರೆದಿದೆ ಎಂಬುದು ಭಯೋತ್ಪಾದಕರಿಗೆ ತಿಳಿದಿತ್ತು ಎಂದಾದರೆ, ಹೆಜ್ಜೆಗೊಬ್ಬರು ಮಿಲಿಟರಿ ಯೋಧರ ಸರ್ಪಗಾವಲು ಹಾಕಿರುವ ಸರ್ಕಾರಕ್ಕೆ ಯಾಕೆ ತಿಳಿಯಲಿಲ್ಲ. ಈ ಗಂಭೀರ ಪ್ರಶ್ನೆಗಳಿಗೆ ಮೋದಿಯವರ ಸರ್ಕಾರ ಉತ್ತರಿಸಬೇಕಾಗಿದೆ.
ಇವುಗಳ ನಡುವೆಯೇ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ನಿಲ್ಲುವುದಾಗಿ ವಿಪಕ್ಷಗಳು ಹೇಳಿಕೊಂಡಿರುವುದು ಶ್ಲಾಘನೀಯ ಕ್ರಮವಾಗಿದೆ.