ವಿದ್ಯಾರ್ಥಿನಿಗೆ ಮುಟ್ಟು ಆಗಿದ್ದ ಕಾರಣಕ್ಕಾಗಿ ಆಕೆಯನ್ನು ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿರುವ ಅಮಾನವೀಯ ಮತ್ತು ಮೌಡ್ಯದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಟ್ಟನ್ನು ಅಸಹ್ಯ, ಅಪವಿತ್ರವೆಂದು ಭಾವಿಸುವ ಧೋರಣೆ ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಗಾಢವಾಗಿ ಬೇರೂರಿದೆ. ಇಂತಹ ಮೌಡ್ಯ ಮತ್ತು ಸಂಪ್ರದಾಯದ ಹೆಸರಿನ ಧೋರಣೆಯ ವಿರುದ್ಧ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸವನ್ನು ಶಾಲೆಗಳು ಮಾಡಬೇಕು. ಆದರೆ, ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರೇ ಇಂತಹ ಶೋಷಣೆಗೆ ಇಳಿದಿರುವುದು ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನು ಹಾಳುಮಾಡುತ್ತವೆ. ಅಂತಹ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿಣತುಕಡವು ತಾಲೂಕಿನ ಸೆಂಗುಟ್ಟೈಪಾಳಯಂ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ.
8ನೇ ತರಗತಿಯ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದರು. ಈ ವೇಳೆ, ಆಕೆಗೆ ಮುಟ್ಟಾಗಿದೆ. ಆಕೆ ಪ್ರಾಂಶುಪಾಲರ ಬಳಿ ‘ಸ್ಯಾನಿಟರಿ ಪ್ಯಾಡ್ ಕೇಳಿದ್ದಾರೆ. ಆಕೆಯ ಋತುಚಕ್ರ ಸಮಸ್ಯೆಗೆ ಸ್ಪಂದಿಸಬೇಕಿದ್ದ ಪ್ರಾಂಶುಪಾಲರು ಆಕೆಯನ್ನು ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ವಿದ್ಯಾರ್ಥಿನಿಯನ್ನು ಶೋಷಣೆಗೆ ಒಳಪಡಿಸಿದ್ದಾರೆ.
ಶಾಲೆಯ ಬಳಿಗೆ ವಿದ್ಯಾರ್ಥಿನಿಯ ತಾಯಿ ಬಂದಿದ್ದು, ಆಕೆ ತರಗತಿಯ ಹೊರಗೆ ಪರೀಕ್ಷೆ ಬರೆಯುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ‘ಮುಟ್ಟಾಗಿರುವ ಕಾರಣ ತನ್ನನ್ನು ಪ್ರಾಂಶುಪಾಲರು ಹೊರಗೆ ಕೂರಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ಘಟನೆಯನ್ನು ವಿಡಿಯೋ ಮಾಡಿಕೊಂಡಿರುವ ವಿದ್ಯಾರ್ಥಿನಿಯ ತಾಯಿ, ಶಿಕ್ಷಣಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ.
A class VIII girl from the Scheduled Caste (#Arunthathiar) recently attained puberty and was allowed to write her examination outside the classroom at a private matriculation school near #Kinathukadavu Taluk in #Coimbatore district.
— Hate Detector 🔍 (@HateDetectors) April 10, 2025
The mother of the minor girl recorded a video… pic.twitter.com/CAGfrv8kCG
ಘಟನೆಯ ಬಗ್ಗೆ ಕೊಯಮತ್ತೂರು ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ವಿವರವಾದ ವರದಿ ನೀಡುವಂತೆ ಶಾಲೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ತನಿಖೆಯ ಬಳಿಕ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ ಗಿರಿಯಪ್ಪನವರ್ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ, ಉತ್ತರ ಪ್ರದೇಶದಲ್ಲಿಯೂ ಇಂಥದ್ದೇ ಘಟನೆ ನಡೆದಿತ್ತು. 11ನೇ ತರಗತಿಯ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯುತ್ತಿದ್ದಾಗ ಮುಟ್ಟಾಗಿತ್ತು. ಆಕೆ ಸ್ಯಾನಿಟರಿ ಪ್ಯಾಡ್ ಕೇಳಿದ ಕಾರಣಕ್ಕಾಗಿ, ಆಕೆಯನ್ನು ಸುಮಾರು 1 ಗಂಟೆಗಳ ಕಾಲ ತರಗತಿಯ ಹೊರಗೆ ನಿಲ್ಲಿಸಿ, ಅಮಾನವೀಯತೆ ಮರೆಯಲಾಗಿತ್ತು.