ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಾಸಗಿ, ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಹೆಗ್ಗಿಲ್ಲದೆ ಏರಿಕೆ ಮಾಡುತ್ತಿವೆ. ದೆಹಲಿಯ ‘ಮದರ್ ಡಿವೈನ್’ ಖಾಸಗಿ ಶಾಲೆ ಶುಲ್ಕವನ್ನು ಬಹುತೇಕ ದ್ವಿಗುಣಗೊಳಿಸಲಾಗಿದೆ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಶಾಸಗಿ ಶಾಲೆಗಳ ಶುಲ್ಕ ಮಾಫಿಯಾ ಮತ್ತೆ ಹೆಚ್ಚಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಶುಲ್ಕ ಹೆಚ್ಚಳದ ವಿರುದ್ಧ ಖಾಸಗಿ ಶಾಲೆಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
“ಖಾಸಗಿ ಶಾಲೆಗಳಲ್ಲಿ ಅತಿಯಾದ ಶುಲ್ಕ ಏರಿಕೆ ನಡೆಯುತ್ತಿದೆ. ಈ ಶುಲ್ಕ ಮಾಫಿಯಾ/ಭ್ರಷ್ಟಾಚಾರದಲ್ಲಿ ಬಿಜೆಪಿ ಕೂಡ ಕೈಜೋಡಿಸಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು” ಎಂದು ಎಎಪಿ ಒತ್ತಾಯಿಸಿದೆ.
“ಅಧಿಕಾರದಲ್ಲಿರುವವರ ಸಮ್ಮತಿ ಇಲ್ಲದೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ. ಪೋಷಕರನ್ನು ಲೂಟಿ ಮಾಡಲು ಶಾಲೆಗಳಿಗೆ ಬಿಜೆಪಿ ಸರ್ಕಾರ ಉಚಿತ ಪಾಸ್ ನೀಡಿದೆ” ಎಂದು ಮಾಜಿ ಶಿಕ್ಷಣ ಸಚಿವ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಧರ್ಮದ ಅಮಲಿಗೆ ಮತವನ್ನ ಬಲಿಗೊಟ್ಟದಕ್ಕೆ ಈ ಶಿಕ್ಷೇ!
— Shivanand Gundanavar (@shivanand087) April 6, 2025
ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ (AAP) ಸೋತು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ, ಖಾಸಗಿ ಶಾಲೆಗಳ ಶುಲ್ಕ ಮಾಫಿಯಾಗಳು ಮತ್ತೆ ತಲೆದೋರಿವೆ.
ರೋಹಿಣಿಯ ಮದರ್ ಡಿವೈನ್ ಶಾಲೆಯ ಮುಂದೆ ಶೇಕಡಾ ನೂರಾರು ಪೋಷಕರು ಶುಲ್ಕ ಹೆಚ್ಚಳದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.#Delhi pic.twitter.com/rBTHBelWAK
“ಖಾಸಗಿ ಶಾಲೆಗಳು ಈಗ ತಮ್ಮ ಇಚ್ಛೆಯಂತೆ ಶುಲ್ಕ ಹೆಚ್ಚಿಸಲು ಪ್ರಾರಂಭಿಸಿವೆ. 2015ರಲ್ಲಿ, ನಾನು ಶಿಕ್ಷಣ ಸಚಿವನಾಗಿದ್ದಾಗ, ನಾವು ತಂದ ಮೊದಲ ಪ್ರಮುಖ ಸುಧಾರಣೆಯೆಂದರೆ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳವನ್ನು ನಿಯಂತ್ರಿಸುವುದು. ಈ ಲೂಟಿಯನ್ನು ನಿಲ್ಲಿಸಲು, ಪ್ರತಿ ಖಾಸಗಿ ಶಾಲೆಯ ಲೆಕ್ಕಪರಿಶೋಧನೆಗೆ ಆದೇಶಿಸಲಾಗಿತ್ತು. ಶಿಕ್ಷಕರ ಸಂಬಳವನ್ನು ಪಾವತಿಸಲು ಹಣವಿಲ್ಲ ಎಂದು ಸಾಬೀತುಪಡಿಸುವ ಶಾಲೆಗಳಿಗೆ ಮಾತ್ರ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡಲಾಗಿತ್ತು. ಈಗ ಶುಲ್ಕ ವಸೂಲಿ ಮಿತಿ ಮೀರಿದೆ. ಪ್ರತಿ ತಿಂಗಳು ಪೋಷಕರಿಂದ 30–40% ಹೆಚ್ಚು ಲೂಟಿ ಮಾಡುವುದು ಸ್ಪಷ್ಟ ಭ್ರಷ್ಟಾಚಾರ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕಾಂಗ್ರೆಸ್ ನಾಯಕರ ದೆಹಲಿ ಭೇಟಿ: ಬಣ ಬಡಿದಾಟ ನಿರ್ಲಕ್ಷ್ಯ, ರಾಹುಲ್ ಗಾಂಧಿ ಕೊಟ್ಟ ಸಂದೇಶವೇನು?
ಸದ್ಯ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಸರ್ಕಾರವು ಶುಲ್ಕ ಏರಿಕೆಯನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿರುವುದಾಗಿ ಹೇಳಿಕೊಂಡಿದೆ. ಶಿಕ್ಷಣ ನಿರ್ದೇಶನಾಲಯವು (DoE) “ಶುಲ್ಕ ಏರಿಕೆ ಸಮಸ್ಯೆಯನ್ನು ‘ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲೆ ಶುಲ್ಕ ಏರಿಕೆಯು ದುಃಖಕರವಾಗಿದೆ. ವಾರ್ಷಿಕ 25 ರಿಂದ 30% ರವರೆಗೆ ಶುಲ್ಕ ಹೆಚ್ಚಿಸಲಾಗುತ್ತಿದೆ ಎಂಬ ಆರೋಪಗಳಿವೆ. ಅಲ್ಲದೆ, ಬೋರ್ಡ್ ಪರೀಕ್ಷೆಗಳಿಗೆ ಪ್ರವೇಶ ಪತ್ರಗಳನ್ನು ನಿರಾಕರಿಸುವುದು, ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಹೆಸರನ್ನು ಅನಧಿಕೃತವಾಗಿ ಹೊಡೆದು ಹಾಕುವುದಾಗಿ ಬೆದರಿಕೆ ಹಾಕುತ್ತಿವೆರುವುದಾಗಿ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮೇಲ್ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದೆ.
ಕೆಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದೆ;
- ಶಾಲಾ ಶುಲ್ಕಕ್ಕೆ ಸಂಬಂಧಿಸಿದ ದೂರುಗಳ ತನಿಕೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ನೇತೃತ್ವದಲ್ಲಿ ತನಿಖಾ ತಂಡ ನೇಮಿಸಲಾಗಿದೆ. ಪೋಷಕರು ನೀಡಿರುವ ದೂರುಗಳಲ್ಲಿ ಉಲ್ಲೇಖಿಸಲಾಗಿರುವ ಶಾಲೆಗಳನ್ನು ತಂಡವು ಪರಿಶೀಲಿಸಲಿದೆ.
- ದೆಹಲಿ ಶಾಲಾ ಶಿಕ್ಷಣ ಕಾಯ್ದೆ ಮತ್ತು 1973ರ ನಿಯಮಗಳ ಅಡಿಯಲ್ಲಿ ಶುಲ್ಕ ನಿಯಮಗಳನ್ನು ಉಲ್ಲಂಘಿಸಿದ ಶಾಲೆಗಳು ಗಂಭೀರ ಕ್ರಮಗಳನ್ನು ಎದುರಿಸಲಿವೆ.
- ಅಧಿಕ ಶುಲ್ಕ ಹೆಚ್ಚಿಸಿರುವ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ.
- ಶಾಲಾ ಹಣಕಾಸಿನ ವಿಶೇಷ ಲೆಕ್ಕಪತ್ರಗಳ ಪರಿಶೀಲನೆ ಪ್ರಾರಂಭಿಸಲಾಗುತ್ತಿದೆ. ಅದಕ್ಕಾಗಿ, ಹಿರಿಯ ಲೆಕ್ಕಪತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
- ಅನಿಯಂತ್ರಿತವಾಗಿ ಶುಲ್ಕ ಹೆಚ್ಚಳ ಮಾಡುವ ಯಾವುದೇ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
2025-26ರ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸುಮಾರು 2,000 ಕೋಟಿ ರೂ. ಮೀಸಲಿಟ್ಟಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಇಲಾಖೆ ದೃಢವಾಗಿದೆ ಎಂದು ಹೇಳಿಕೊಂಡಿದೆ.