ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ಜನಗಣತಿಯಲ್ಲಿ ಜಾತಿ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ತಮ್ಮ ಕ್ಷೇತ್ರ ವಯನಾಡಿಗೆ ಎರಡು ದಿನಗಳ ಭೇಟಿ ನೀಡಿರುವ ಕಾಂಗ್ರೆಸ್ ನಾಯಕಿ, ಕೇಂದ್ರ ಸರ್ಕಾರದ ಈ ನಿರ್ಧಾರವು ಜನರ ಬೇಡಿಕೆ ಮತ್ತು ಈ ಉದ್ದೇಶವನ್ನು ಬೆಂಬಲಿಸಿದವರ ನಿರಂತರ ಪ್ರಯತ್ನಗಳ ಫಲವಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?
“ನನ್ನ ಸಹೋದರ (ರಾಹುಲ್ ಗಾಂಧಿ) ಕಳೆದ ವರ್ಷ ಈ ವಿಷಯವನ್ನು ಕೈಗೆತ್ತಿಕೊಂಡರು. ಬಿಜೆಪಿ ಜಾತಿ ಜನಗಣತಿಯನ್ನು ಬಲವಾಗಿ ವಿರೋಧಿಸಿದರೂ ಸಹ ಅದರ ಪರವಾಗಿ ಮಾತನಾಡುತ್ತಲೇ ಇದ್ದರು” ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.
“ಜಾತಿ ಜನಗಣತಿ ನಡೆಸಬೇಕು ಎಂದು ಬಲವಾಗಿ ಆಗ್ರಹಿಸಿದಾಗ ಅವರನ್ನು (ರಾಹುಲ್ ಗಾಂಧಿ) ಸಂಸತ್ತಿನಲ್ಲಿ ಅಪಹಾಸ್ಯ ಮಾಡಲಾಯಿತು” ಎಂದು ಹೇಳಿದರು. ದೇಶಾದ್ಯಂತ ಜನರ ಒತ್ತಡದಿಂದಾಗಿ ಬಿಜೆಪಿ ಸರ್ಕಾರ ಕೊನೆಗೂ ತನ್ನ ನಿರ್ಧಾರವನ್ನು ಬದಲಾಯಿಸಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಹಾಗೆಯೇ ಸರ್ಕಾರವು ನಿಖರವಾದ ಡೇಟಾವನ್ನು ಸಂಗ್ರಹಿಸುವ ಮೂಲಕ ಜಾತಿ ಸಮೀಕ್ಷೆಯನ್ನು ಸರಿಯಾಗಿ ನಡೆಸುತ್ತದೆ ಎಂಬ ಭರವಸೆಯಿದೆ ಎಂದರು.
