ಆಪರೇಷನ್ ಸಿಂಧೂರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದು, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದ ಕಾರಣಕ್ಕೆ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಅವರನ್ನು ಬಂಧಿಸಲಾಗಿದೆ. ಈ ಬಂಧನ ಸುದ್ದಿಯು ದೇಶದಲ್ಲಿ ಧರ್ಮದ ಕಾರಣಕ್ಕೆ ಒಬ್ಬ ವ್ಯಕ್ತಿ ಇಷ್ಟೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮೋದಿ ಸರ್ಕಾರವನ್ನ ಪ್ರಶ್ನೆ ಮಾಡಿದರೆ, ಅಂತಹವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಜೈಲಿಗೆ ದೂಡುತ್ತಿರುವ ಪರಿಸ್ಥಿತಿಗೆ ಭಾರತದ ಬಂದುನಿಂತಿದೆ. ಅಂತಹ ಹಲವು ಪ್ರಕರಣಗಳು ನಮ್ಮ ಮುಂದೆ ಇವೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಅಲಿ ಖಾನ್ ಕೂಡ ಜೈಲುಪಾಲಾಗಿದ್ದಾರೆ.
ವಿಪರ್ಯಾಸವೆಂದರೆ, ಅಪರೇಷನ್ ಸಿಂಧೂರ ವಿಚಾರವಾಗಿ ಒಂದು ಕಡೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಾಧ್ಯಾಪಕರನ್ನು ಬಂಧನ ಮಾಡಲಾಗಿದೆ. ಮತ್ತೊಂದೆಡೆ, ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಅತ್ಯಂತ ಕೀಳಾಗಿ ಟೀಕೆ ಮಾಡಿದ ಬಿಜೆಪಿ ನಾಯಕ, ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ, ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಈ ಎರಡೂ ಘಟನೆಗಳನ್ನು ಗಮನಿಸಿದರೇ, ದೇಶದಲ್ಲಿ ಕಾನೂನು ಸುವ್ಯವಸ್ಥೆ, ವಾಕ್ ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗೆಗಿನ ಗಂಭೀರ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ.
ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಲಿ ಖಾನ್ ಮಹಮೂದಾಬಾದ್ ಅವರ ಬಂಧನ ಸದ್ಯ ಚರ್ಚೆಗೆ ಗ್ರಾಸವಾಗಿದೆ. ‘ಆಪರೇಷನ್ ಸಿಂಧೂರ’ ಕುರಿತಾದ ಸಾಮಾಜಿಕ ಮಾಧ್ಯಮದ ಪೋಸ್ ಹಾಕಿದ್ದಕ್ಕೆ ಅವರನ್ನು ಬಂಧಿಸಲಾಗಿದೆ. ಅಲಿ ಖಾನ್ ಅವರು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ, ‘ಆಪರೇಷನ್ ಸಿಂಧೂರ’ ಕುರಿತು ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಆದರೆ, ಅಲಿ ಖಾನ್ ಹಂಚಿಕೊಂಡಿದ್ದೇನು? ಅದರಲ್ಲಿ ಆಕ್ಷೇಪಾರ್ಯ ಅಥವಾ ಧಕ್ಕೆಯುಂಟಾಗುವ ಹೇಳಿಕೆ ಏನೂ ಇಲ್ಲ ಎಂಬುದು ಅವರ ಪೋಸ್ಟ್ ಓದಿದರೆ ಗೊತ್ತಾಗುತ್ತದೆ. ಅವರು ಇಂಗ್ಲಿಷ್‌ನಲ್ಲಿ ಬರೆದಿದ್ದ ಪೋಸ್ಟ್‌ನ ಕನ್ನಡಾನುವಾದ ಹೀಗಿದೆ;
ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಹೊಸ ತಿರುವು: ಆಪರೇಷನ್ ಸಿಂಧೂರ್
ರಣತಂತ್ರದ ದೃಷ್ಟಿಯಿಂದ ಭಾರತವು ಪಾಕಿಸ್ತಾನದಲ್ಲಿ ಸೈನ್ಯ ಮತ್ತು ಭಯೋತ್ಪಾದಕರ ನಡುವಿನ ವ್ಯತ್ಯಾಸವನ್ನು ಅಳಿಸಿ ಹಾಕುವ ಹೊಸ ಹಂತಕ್ಕೆ ನಾಂದಿ ಹಾಡಿದೆ. ಇದರಿಂದಾಗಿ, ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಪ್ರತಿಕ್ರಿಯೆಯಾಗಿ ಸಾಂಪ್ರದಾಯಿಕ ಮಿಲಿಟರಿ ಕ್ರಮವನ್ನ ಜರುಗಿಸುವುದು ಸಹಜ. ಇದು ಪಾಕಿಸ್ತಾನದ ಸೈನ್ಯದ ಮೇಲೆ ಒತ್ತಡ ಹೇರಿದ್ದು, ಇನ್ನು ಮುಂದೆ ಪಾಕಿಸ್ತಾನದ ಸೇನೆ ಭಯೋತ್ಪಾದಕರ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ.
ಪಾಕಿಸ್ತಾನದ ಸೈನ್ಯವು ದೀರ್ಘಕಾಲದಿಂದ ಭಯೋತ್ಪಾದಕರನ್ನು ಬಳಸಿಕೊಂಡು ಪ್ರದೇಶದ ಸ್ಥಿರತೆಗೆ ಭಂಗ ತಂದಿದೆ, ಜೊತೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಾವೇ ಭಯೋತ್ಪಾದನೆಯ ಬಲಿಪಶುಗಳೆಂದು ಚಿತ್ರಿಸಿಕೊಂಡಿದೆ. ಇದೇ ಭಯೋತ್ಪಾದಕರನ್ನು ಪಾಕಿಸ್ತಾನದಲ್ಲಿ ಧಾರ್ಮಿಕ ಒಡಕುಗಳನ್ನು ಉಂಟುಮಾಡಲು ಬಳಸಲಾಗಿದೆ. ಆಪರೇಷನ್ ಸಿಂಧೂರ್ ಭಾರತ-ಪಾಕ್ ಸಂಬಂಧದ ಸಾಂಪ್ರದಾಯಿಕ ತಿಳುವಳಿಕೆಯನ್ನು ಮರುಹೊಂದಿಸಿದೆ, ಏಕೆಂದರೆ ಭಯೋತ್ಪಾದಕ ದಾಳಿಗಳಿಗೆ ಸೇನೆಯ ಪ್ರತಿಕ್ರಿಯೆಯೇ ಉತ್ತರವಾಗಿರಲಿದೆ, ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಸ್ಥಗಿತಗೊಂಡಿವೆ.
ಈ ಒಡಕಿನ ಹೊರತಾಗಿಯೂ, ಭಾರತೀಯ ಸಶಸ್ತ್ರ ಪಡೆಗಳು ಸೈನಿಕ ಅಥವಾ ನಾಗರಿಕ ನೆಲೆ ಅಥವಾ ಮೂಲಸೌಕರ್ಯಗಳನ್ನು ಗುರಿಯಾಗಿಸದಂತೆ ಎಚ್ಚರಿಕೆ ವಹಿಸಿವೆ, ಇದರಿಂದ ಅನಗತ್ಯವಾಗಿ ಘರ್ಷಣೆ ಉಲ್ಬಣಗೊಳ್ಳದಂತೆ ತಡೆಯಲಾಗಿದೆ. ಸಂದೇಶವು ಸ್ಪಷ್ಟವಾಗಿದೆ: ನೀವು ನಿಮ್ಮ ಭಯೋತ್ಪಾದನೆ ಸಮಸ್ಯೆಯನ್ನು ಮಟ್ಟಹಾಕದಿದ್ದರೆ, ನಾವೇ ಮುಂದಾಗಿ ಮಟ್ಟಹಾಕುತ್ತೇವೆ! ಎರಡೂ ರಾಷ್ಟ್ರಗಳ ನಾಗರಿಕರ ಹತ್ಯೆಯು ದುರಂತವಾಗಿದ್ದು, ಇದೇ ಯುದ್ಧವನ್ನು ತಪ್ಪಿಸಲು ಪ್ರಮುಖ ಕಾರಣವಾಗಿದೆ.
ಕೆಲವರು ಯುದ್ಧಕ್ಕಾಗಿ ಹಾತೊರೆಯುತ್ತಿದ್ದಾರೆ. ಆದರೆ ಅವರು ಯುದ್ಧವನ್ನು ಕಂಡವರಲ್ಲ, ಯುದ್ಧ ವಲಯದಲ್ಲಿ ವಾಸಿಸಿದವರೂ ಅಥವಾ ಆ ಸ್ಥಳಗಳಿಗೆ ಭೇಟಿ ನೀಡಿದವರೂ ಅಲ್ಲ. ಯುದ್ಧಕ್ಕಾಗಿ ಹವಣಿಸುವುದು, ತಾವೇ ಯುದ್ಧದ ಯೋಧರಂತೆ ವರ್ತಿಸುವುದು ನಿಮ್ಮನ್ನು ಸೈನಿಕನನ್ನಾಗಿ ಮಾಡುವುದಿಲ್ಲ. ಘರ್ಷಣೆಯಿಂದಾಗಿ ಪ್ರಾಣಹಾನಿ, ನಷ್ಟ ಎದುರಿಸಿದವರ ನೋವನ್ನು ನೀವು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ. ಯುದ್ಧವು ಕ್ರೂರವಾದದ್ದು. ಇದರಿಂದ, ಬಡವರು ಅನಗತ್ಯವಾಗಿ ಹೆಚ್ಚಿನ ಯಾತನೆಯನ್ನು ಎದುರಿಸುತ್ತಾರೆ. ಈ ಯುದ್ಧದಿಂದ ಲಾಭ ಪಡೆಯುವವರು ಕೇವಲ ರಾಜಕಾರಣಿಗಳು ಮತ್ತು ರಕ್ಷಣಾ ಕಂಪನಿಗಳು ಮಾತ್ರ. ಆದರೆ ರಾಜಕೀಯ ಘರ್ಷಣೆಗಳು ಸೈನಿಕ ಕ್ರಮಗಳಿಂದ ಎಂದಿಗೂ ಪರಿಹರಿಸಲ್ಪಟ್ಟಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.
ಕೊನೆಯದಾಗಿ, ಕರ್ನಲ್ ಸೋಫಿಯಾ ಕುರೇಖಿ ಅವರನ್ನು ಅನೇಕ ಬಲಪಂಥೀಯ ವಿಮರ್ಶಕರು ಮೆಚ್ಚಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ, ಆದರೆ ಅವರು ಗುಂಪು ದಾಳಿಗಳಿಗೆ, ಕೋಮುರಾಜಕಾರಣದಿಂದ ಮನೆ ಕಳೆದುಕೊಂಡವರಿಗೆ, ಬಿಜೆಪಿಯ ದ್ವೇಷ ರಾಜಕೀಯಕ್ಕೆ ಬಲಿಯಾದ ಸಂತ್ರಸ್ತ ಭಾರತೀಯ ನಾಗರಿಕರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಬಹುದು. ಇಬ್ಬರು ಮಹಿಳಾ ಸೈನಿಕರು ಸೇನಾ ಕಾರ್ಯಾಚರಣೆಯನ್ನು ವಿವರಿಸಿರುವ ದೃಶ್ಯವು ಮುಖ್ಯವಾಗಿದೆ, ಆದರೆ ಈ ದೃಶ್ಯವು ನೆಲದ ಮೇಲಿನ ವಾಸ್ತವಕ್ಕೂ ಬರಬೇಕು. ಇಲ್ಲದಿದ್ದರೆ ಇದು ಕೇವಲ ಕಪಟತನವಾಗಿರುತ್ತದೆ. ಒಬ್ಬ ಪ್ರಮುಖ ಮುಸ್ಲಿಂ ರಾಜಕಾರಣಿಯು “ಪಾಕಿಸ್ತಾನ ಮುರ್ದಾಬಾದ್” ಎಂದು ಹೇಳಿದಾಗ, ಪಾಕಿಸ್ತಾನಿಗಳು ಅವರನ್ನು ಟ್ರೋಲ್ ಮಾಡಿದ್ದಕ್ಕೆ, ಭಾರತೀಯ ಬಲಪಂಥೀಯ ವಿಮರ್ಶಕರು “ಅವನು ನಮ್ಮ ಮುಲ್ಲಾ” ಎಂದು ಸಮರ್ಥಿಸಿಕೊಂಡರು. ಇದು ಖಂಡಿತವಾಗಿಯೂ ತಮಾಷೆಯಾಗಿದೆ, ಆದರೆ ಇದು ಭಾರತೀಯ ರಾಜಕೀಯದಲ್ಲಿ ಕೋಮುವಾದವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸೂಚಿಸುತ್ತದೆ.
ನನಗೆ, ಸೇನೆಯ ಪತ್ರಿಕಾಗೋಷ್ಠಿಯು ಕೇವಲ ಕ್ಷಣಿಕ ಝಲಕ್—ಬಹುಶಃ ಒಂದು ಭ್ರಮೆ ಮತ್ತು ಸೂಚನೆ—ಪಾಕಿಸ್ತಾನದ ನಿರ್ಮಾಣದ ತರ್ಕವನ್ನು ಧಿಕ್ಕರಿಸಿದ ಭಾರತದ ಕಲ್ಪನೆಯಾಗಿದೆ. ನಾನು ಹೇಳಿದಂತೆ, ಸಾಮಾನ್ಯ ಮುಸ್ಲಿಮರು ಎದುರಿಸುವ ನೆಲದ ಮೇಲಿನ ವಾಸ್ತವವು ಸರ್ಕಾರವು ತೋರಿಸಲು ಪ್ರಯತ್ನಿಸಿದ್ದಕ್ಕಿಂತ ಭಿನ್ನವಾಗಿದೆ, ಆದರೆ ಏಕತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ಭಾರತದ ಕಲ್ಪನೆಯು ಸಂಪೂರ್ಣವಾಗಿ ಸತ್ತಿಲ್ಲ ಎಂಬುದನ್ನು ಈ ಪತ್ರಿಕಾಗೋಷ್ಠಿಯು ತೋರಿಸುತ್ತದೆ.
ಇದು ಅವರು ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿನ ಸಂಗತಿ. ಅವರು ಈ ಪೋಸ್ಟ್ ಹಾಕಿದ್ದಕ್ಕೆ ಮೇ 12ನೇ ತಾರೀಖು ಮಹಿಳಾ ಆಯೋಗದಿಂದ ಅಲಿಖಾನ್ ಅವರಿಗೆ ನೋಟಿಸ್‌ವೊಂದು ಬರುತ್ತದೆ. ಜತೆಗೆ, ಮೇ 14ನೇ ತಾರೀಖು ಖುದ್ದಾಗಿ ಹಾಜರಾಗಿ ವಿವರಣೆ ನೀಡಬೇಕು ಎಂದು ತಿಳಿಸಿರುತ್ತಾರೆ. ಆದರೆ, ಅಲಿಖಾನ್ ಅವರು ಮೇ 14ನೇ ತಾರೀಖು ವಿಚಾರಣೆಗೆ ಹಾಜರಾಗಿಲ್ಲ. ಅದರ ಪ್ರತಿಯಾಗಿ ಒಂದು ಪ್ರತಿಕ್ರಿಯೆಯನ್ನು ನೀಡಿ ಪೋಸ್ಟ್ ಹಾಕುತ್ತಾರೆ. ಇದನ್ನೇ ಪತ್ರದ ರೂಪದಲ್ಲಿಯೂ ಕೂಡ ಬರೆದು ಮಹಿಳಾ ಆಯೋಗಕ್ಕೆ ಕಳುಹಿಸುತ್ತಾರೆ. ಅದು ಏನೆಂದ್ರೆ, “ಈ ವಿಚಾರಕ್ಕೂ ಮಹಿಳಾ ಆಯೋಗಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಅದರಲ್ಲಿ ವಾಸ್ತವದ ಸಂಗತಿಯನ್ನೇ ಬರೆದಿದ್ದೇನೆ. ಆಯೋಗ ತಮ್ಮ ಹೇಳಿಕೆಯನ್ನ ತಪ್ಪಾಗಿ ತಿಳಿದುಕೊಂಡಿದೆ” ಎಂದು ಅಲಿಖಾನ್ ಅವರು ಹೇಳಿದ್ದರು.
ಈ ವರದಿ ಓದಿದ್ದೀರಾ?: ಸಂವಿಧಾನವೇ ಸುಪ್ರೀಂ: ಧನಕರ್‌ಗೆ ಸಿಜೆಐ ಪವರ್‌ಫುಲ್ ಕ್ಲಾಸ್
ಆದರೂ ಅಲಿಖಾನ್ ಅವರ ಹೇಳಿಕೆಯನ್ನು ತಿರುಚಿ ದೊಡ್ಡ ಇಶ್ಯೂ ಮಾಡಿ ಅಲಿಖಾನ್ ಮೇಲೆ ಎರಡು ಎಫ್‌ಐಆರ್ ದಾಖಲು ಮಾಡಲಾಗಿದೆ. “ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಮತ್ತು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಜತೇರಿ ಗ್ರಾಮದ ಸರಪಂಚ್ ಯೋಗೇಶ್ ಜಥೇರಿ ದಾಖಲಿಸಿದ ದೂರು ಆಧರಿಸಿ ಸೋನಿಪತ್‌ನ ರಾಯ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ” ಎಂದು ಹರಿಯಾಣ ಉಪ ಪೊಲೀಸ್ ಆಯುಕ್ತ ನರೇಂದರ್ ಕಡ್ಯಾನ್ ಹೇಳಿದ್ದಾರೆ.
ಎಫ್‌ಐಆರ್ ದಾಖಲಾದ ಬಳಿಕ, ಹರಿಯಾಣದ ಮಹಿಳಾ ಅಧ್ಯಕ್ಷೆ ರೇಣು ಅವರನ್ನು ಖಾಸಗಿ ಮಾಧ್ಯಮದವೊಂದು ಪ್ರಶ್ನಿಸಿತು. “ಅಲಿ ಖಾನ್ ಅವರು ಏನು ಬರೆದು ಕೊಂಡಿದ್ದಾರೆ. ಸೋಫಿಯಾ ಖುರೇಷಿ ಮತ್ತು ವ್ಯೋಮೀಕಾ ಅವರ ಬಗ್ಗೆ ಏನು ಬರೆದಿದ್ದಾರೆ. ತಿಳಿಸಿ” ಎಂದು ಸುದ್ದಿ ನಿರೂಪಕರು ಪ್ರಶ್ನಿಸಿದರು. ಈ ಬಗ್ಗೆ ದೂರು ಕೊಡುವಂತಹ ವಾಕ್ಯ ಅಥವಾ ದೇಶದ್ರೋಹದ ವಿಚಾರ ಈ ಪೋಸ್ಟ್‌ನಲ್ಲಿ ಏನಿದೆ ಎಂದು ಕೇಳಿದರು. ಆದರೆ, ರೇಣು ಅವರು ಉತ್ತರಿಸಲಿಲ್ಲ. ನಂತರ, ಕನಿಷ್ಠ ಅವರ ಪೋಸ್ಟ್ ಬಗ್ಗೆ ಎರಡೇ ಎರಡು ವ್ಯಾಕ್ಯ, ಹೋಗಲಿ ಒಂದೇ ಒಂದು ಪದ ದೇಶ ವಿರೋಧಿ, ಸ್ತೀ ವಿರೋಧಿ ಬಗ್ಗೆ ಅವರು ಏನು ಬರೆದಿದ್ದಾರೆ ಎಂದು ತಿಳಿಸಿ ಎಂದು ಕೇಳಿದರು. ಆದರೆ, ರೇಣು ಅವರಿಂದ ಯಾವುದೇ ಉತ್ತರ ಬರಲಿಲ್ಲ. ಅಲಿ ಖಾನ್ ಅವರ ಬರವಣಿಗೆಯಲ್ಲಿ ಅವರನ್ನು ದೂಷಿಸಬಹುದಾದ ಎರಡು ಸಾಲು ಯಾವುದು ಎಂದು ದೂರುದಾರರಿಗೇ ಗೊತ್ತಿಲ್ಲ. ನಿಜಕ್ಕೂ ಇದು ಆಘಾತಕಾರಿ..
ಯಾವ ಟೀಕೆಯೂ ಇಲ್ಲದ, ಸತ್ಯವನ್ನ ತಿಳಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗುತ್ತದೆ. ಪೊಲೀಸರು ಅಲಿ ಖಾನ್ ಅವರನ್ನ ಬಂಧನ ಮಾಡಿ ದೇಶದ್ರೋಹಿ ಕಾಯ್ದೆಯಡಿ ಬಂಧಿಸಿದ್ದಾರೆ.
ಸತ್ಯವನ್ನು ತಿಳಿಸುವ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅಲಿ ಖಾನ್ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿ ಬಂಧಿಸಿರುವ ಸರ್ಕಾರ, ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ ಶಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಬಂಧನವಾಗಿಲ್ಲ. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಇವರು ಆರಾಮಾಗಿ, ಸ್ವತಂತ್ರ್ಯವಾಗಿ ಹೊರಗಡೆ ಓಡಾಡಿಕೊಂಡು ಇದ್ದಾರೆ. ಆದ್ರೆ, ಬಲಪಂಥೀಯವನ್ನ ಟೀಕೆ ಮಾಡಿದಕ್ಕೆ, ಮುಸ್ಲಿಂ ವ್ಯಕ್ತಿ ಎನ್ನುವ ಕಾರಣಕ್ಕೆ ಅಲಿಖಾನ್ ಬಂಧನವಾಯ್ತಾ ಎನ್ನುವ ಪ್ರಶ್ನೆ ಅನಿವಾರ್ಯವಾಗಿ ಮೂಡುತ್ತೆ…