50ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿಸಲು ನವೆಂಬರ್ 1ರಂದು ಸಂಜೆ ಐದು ಗಂಟೆಗೆ ರಾಜ್ಯಾದ್ಯಂತ ಕೆಂಪು-ಹಳದಿ ಗಾಳಿಪಟ ಹಾರಿಸಲು ಕರ್ನಾಟಕ ಸರ್ಕಾರ ಸೂಚನೆ ನೀಡಿದೆ.
ಇದೇ ಹೊತ್ತಿನಲ್ಲಿ, ತಮಿಳುನಾಡಿನಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರದ ಬಳಕೆ, ತಯಾರಿಕೆ, ಮಾರಾಟವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿಯೂ ಈ ಹಿಂದೆಯೇ ಮಾಂಜಾ ದಾರ ಮಾರಾಟ ನಿಷೇಧಿಸಲಾಗಿತ್ತು. ಆದರೂ, ಅಲ್ಲಲ್ಲಿ ಇವುಗಳ ಮಾರಾಟ ಕಂಡುಬರುತ್ತಿದೆ.
ಹಾರುವ ಗಾಳಿಪಟ ಕಣ್ಣಿಗೆ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ ಇದಕ್ಕೆ ಬಳಸುವ ದಾರದಿಂದ ಅಷ್ಟೇ ಅಪಾಯಗಳಾಗುವ ಸಾಧ್ಯತೆಗಳಿವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಮಾಂಜಾ ದಾರದ ಎಳೆಗಳು ನೈಲಾನ್, ಪ್ಲಾಸ್ಟಿಕ್, ಕೆಲವೊಮ್ಮೆ ಗಾಜಿನಿಂದ ಕೂಡ ಲೇಪಿತವಾಗಿರುತ್ತವೆ. ಇವುಗಳು ಮನುಷ್ಯರ ಕುತ್ತಿಗೆಗೆ ಅಥವಾ ಪ್ರಾಣಿ, ಪಕ್ಷಿಗಳಿಗೆ ಸಿಲುಕಿಕೊಂಡರೆ ಖಂಡೀತವಾಗಿಯೂ ಕೊಯ್ಯುವುತ್ತವೆ. ಅಂತಹ ಹಲವು ಘಟನೆಗಳು ಈ ಹಿಂದೆ ನಡೆದಿವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
2017ರಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಸೇರಿದಂತೆ ಇತರೆ ಸಂಸ್ಥೆಗಳು ಸಲ್ಲಿಸಿದ ಮನವಿ ಮೇರೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಅಂತಹ ದಾರಗಳ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದಾರವನ್ನು ನಿಷೇಧಿಸುವಂತೆ ನಿರ್ದೇಶನ ನೀಡಿತ್ತು.
ಗಾಳಿಪಟ ಹಾರಿಸಲು ನೈಲಾನ್ ದಾರ ಬಳಸ ಬೇಡಿ ಎಂದು ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಗಾಳಿಪಟ ಹಾರಿಸುವಾಗ ಬಟ್ಟೆ ದಾರವನ್ನು ಬಳಸಲು ಸೂಚಿಸಬೇಕು, ಇವು ಪ್ರಾಣಿ, ಪಕ್ಷಿಗಳಿಗೆ ಅಪಾಯ ಉಂಟು ಮಾಡುವುದಿಲ್ಲ. ದಾರಗಳೇ ಕ್ರಮೇಣ ತುಂಡಾಗುತ್ತವೆ. ಆದರೆ ಮಾಂಜಾ ದಾರ ಸುಲಭವಾಗಿ ತುಂಡಾಗುವುದಿಲ್ಲ ಎಂದು ಹಸಿರು ನ್ಯಾಯಮಂಡಳಿ ಹೇಳಿದೆ.