ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪ್ರಚೋದನಕಾರಿ ಪೋಸ್ಟ್‌ನಿಂದಾಗಿ ಹಿಂಸಾಚಾರ ನಡೆದಿದ್ದು, ಸುಮಾರು 50 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ.
ಕೆಲವು ಕಿಡಿಗೇಡಿಗಳು ಇಸ್ಲಾಂ ಧರ್ಮವನ್ನು ಅಪಮಾನಿಸುವ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪೋಸ್ಟ್‌ಅನ್ನು ಗಮನಿಸಿದ ಮುಸ್ಲಿಂ ಮುಖಂಡರು ವಡೋದರಾ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
ಇದೇ ವೇಳೆ, ಮತ್ತೊಂದು ಸಮುದಾಯದ ಕೆಲವು ಕೋಮುವಾದಿ ಪುಂಡರು ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮವಾಗಿ, ಹಿಂಸಾಚಾರ ಭುಗಿಲೆದ್ದಿದೆ. ಆದಾಗ್ಯೂ, ಪೊಲೀಸರು ಪರಿಸ್ಥಿತಿಯನ್ನು ಶೀಘ್ರವೇ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಜುನಿಗಢೀ ಪ್ರದೇಶದಲ್ಲಿನ ವಾಹನಗಳನ್ನು ಕೆಲವು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ ಎಂದು ವಡೋದರಾ ನಗರ ಉಪ ಪೊಲೀಸ್ ಆಯುಕ್ತ (4ನೇ ವಲಯ) ಆ್ಯಂಡ್ರ್ಯೂ ಮ್ಯಾಕ್ವಾನ್ ತಿಳಿಸಿದ್ದಾರೆ.
ಘಟನೆ ಸಂಬಂಧಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದು; ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದವನ ವಿರುದ್ಧ ದಾಖಲಾಗಿದ್ದರೆ, ಮತ್ತೊಂದು;ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ವಿರುದ್ಧ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.