ಅಧಿಕಾರ ದುರ್ಬಳಕೆ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡು ವಂಚನೆ ಎಸಗಿದ ಆರೋಪಗಳನ್ನು ಎದುರಿಸುತ್ತಿರುವ ವಿವಾದಾತ್ಮಕ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸರ್ಕಾರ ವಜಾಗೊಳಿಸಿದೆ. ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಭಾರತೀಯ ಆಡಳಿತ ಸೇವೆಗಳಿಂದ ಕೂಡಲೇ ಜಾರಿಯಾಗುವಂತೆ ಬಿಡುಗಡೆಗೊಳಿಸಿದೆ. ಕೇಂದ್ರ ಲೋಕಸೇವಾ ಆಯೋಗವು ಪೂಜಾ ಅವರ ನೇಮಕಾತಿಯನ್ನು ರದ್ದುಗೊಳಿಸಿದ ಸುಮಾರು ಒಂದು ತಿಂಗಳ ಬಳಿಕ ಕೇಂದ್ರದ ನಿರ್ಧಾರ ಪ್ರಕಟವಾಗಿದೆ.
ಪೂಜಾ ಅವರು ಯುಪಿಎಸ್‌ಸಿ ನೇಮಕಾತಿಯಲ್ಲಿನ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಅಂಗವಿಕಲ ಕೋಟಾದ ಪ್ರಯೋಜನಗಳನ್ನು ಪಡೆಯಲು ಸುಳ್ಳು ದಾಖಲೆಗಳನ್ನು ಒದಗಿಸಿ ವಂಚನೆ ಎಸಗಿರುವುದು ಕಂಡುಬಂದಿತ್ತು. ಆಕೆಯ ಆಯ್ಕೆಯನ್ನು ರದ್ದುಗೊಳಿಸಿದ ಬಳಿಕ ಯುಪಿಎಸ್‌ಸಿ, ಅವರು ಜೀವಮಾನಪರ್ಯಂತ ಮತ್ತೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳದಂತೆ ನಿಷೇಧ ವಿಧಿಸಿದೆ.
ಅಷ್ಟೇ ಅಲ್ಲದೆ, ಪೂಜಾ ಖೇಡ್ಕರ್ ತಮ್ಮ ಹೆಸರು ಹಾಗೂ ವಿಳಾಸಗಳನ್ನು ಬದಲಿಸಿಕೊಂಡು ನಕಲಿ ಗುರುತಿನಲ್ಲಿ ಅನೇಕ ಬಾರಿ ಪರೀಕ್ಷೆ ಬರೆದಿರುವುದನ್ನು ಸಹ ಯುಪಿಎಸ್‌ಸಿ ಪತ್ತೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಾಯಲ್ಲಿ ಮತ್ತೆ ದೇವರು, ಮತ್ತೆ ಸುದ್ದಿ, ಮತ್ತೆ ಮೌನ!
ಪೂಜಾ ಖೇಡ್ಕರ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದ ಬಳಿಕ ನಡೆದ ತನಿಖೆಗಳಲ್ಲಿ ಅವರ ವಂಚನೆಯ ಕೃತ್ಯಗಳೂ ಬೆಳಕಿಗೆ ಬಂದಿದ್ದವು. ಇದು ಒಬಿಸಿ ಹಾಗೂ ಅಂಗವಿಲ ಕೋಟಾದಡಿ ಆಯ್ಕೆಯಾದ ಇತರೆ ಅಭ್ಯರ್ಥಿಗಳಿಗೂ ಕಂಟಕ ಉಂಟುಮಾಡಿದೆ. 2009 ರಿಂದ 2023ರವರೆಗೂ ಐಎಎಸ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದ 15 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ವಿವರಗಳನ್ನು ಯುಪಿಎಸ್‌ಸಿ ಒರೆಗೆ ಹಚ್ಚಿದೆ.
“ಈ ವಿಸ್ತೃತ ಕಾರ್ಯದ ಬಳಿಕ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರನ್ನು ಹೊರತುಪಡಿಸಿ, ಸಿಎಸ್ಇ ನಿಯಮಗಳ ಅಡಿ ಅನುಮತಿ ನೀಡಿರುವಂತೆ ಗರಿಷ್ಠ ಸಂಖ್ಯೆಯ ಪ್ರಯತ್ನಗಳನ್ನು ಬೇರೆ ಯಾವ ಅಭ್ಯರ್ಥಿಯೂ ನಡೆಸಿರುವುದು ಕಂಡುಬಂದಿಲ್ಲ” ಎಂದು ನಾಗರಿಕ ಸೇವಾ ಪರೀಕ್ಷೆ ನಿಯಮಗಳನ್ನು ಉಲ್ಲೇಖಿಸಿ ಯುಪಿಎಸ್‌ಸಿ ಹೇಳಿತ್ತು.
ಈಗ ಕೇಂದ್ರ ಸರ್ಕಾರವು ಸೆ 6ರಂದು ಐಎಎಸ್ (ಪ್ರೊಬೇಷನ್ ) 1954ರ ನಿಯಮ 12ರ ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪೂಜಾ ಅವರನ್ನು ಐಎಎಸ್ ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ತಮಗೆ ಪ್ರತ್ಯೇಕ ಕಾರು, ಸಿಬ್ಬಂದಿ ಹಾಗೂ ಕಚೇರಿ ನೀಡಬೇಕು ಎಂದು ಪೂಜಾ ಬೇಡಿಕೆ ಇರಿಸಿರುವುದಾಗಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರು ಜೂನ್‌ನಲ್ಲಿ ಪತ್ರ ಬರೆದಿದ್ದರು. ಎರಡು ವರ್ಷದ ಪ್ರೊಬೇಷನರಿ ಹುದ್ದೆಯಲ್ಲಿ ಅವರಿಗೆ ಈ ಸೌಲಭ್ಯಗಳಿಗೆ ಅರ್ಹತೆ ಇರಲಿಲ್ಲ. ಈ ಪತ್ರದ ಬೆನ್ನಲ್ಲೇ ಪೂಜಾ ವಿವಾದ ಬೆಳಕಿಗೆ ಬಂದಿತ್ತು. ಅವರು ತಮ್ಮ ಖಾಸಗಿ ಐಷಾರಾಮಿ ಕಾರಿಗೆ ಮಹಾರಾಷ್ಟ್ರ ಸರ್ಕಾರ ಫಲಕದ ಜತೆಗೆ ಕೆಂಪು ದೀಪ ಅಳವಡಿಸಿದ್ದು ಪತ್ತೆಯಾಗಿತ್ತು. ಈ ವಿವಾದದ ನಂತರ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೆಲ್ಲದರ ನಡುವೆ ಅವರ ನೇಮಕಾತಿಯೇ ಅಕ್ರಮವಾಗಿದೆ ಎನ್ನುವುದು ಬಯಲಾಗಿತ್ತು. ಒಬಿಸಿ ಅಭ್ಯರ್ಥಿಗಳು ಹಾಗೂ ಅಂಗವಿಕಲರಿಗೆ ಇರುವ ಕೋಟಾಗಳಿಗಾಗಿ ಸುಳ್ಳು ದಾಖಲೆ ನೀಡಿ ಅವರು ನೇಮಕಾತಿಗೊಂಡಿರುವುದು ಪತ್ತೆಯಾಗಿದೆ.

ಇಂತಹ ಅಕ್ರಮ ಪ್ರವೇಶ ಪಡೆದ ವ್ಯಕ್ತಿಗಳಿಗೆ ವಜಾಗೊಳಿಸಿದರೆ ಮಾತ್ರ ಸಾಲದು, ಕಾರಾಗೃಹ ಶಿಕ್ಷೆಯನ್ನೂ ವಿಧಿಸಬೇಕು. ಈ ಹೆಂಗಸು ದವಲತ್ತು ತೋರಿಸಲೆಂದೇ ಅಕ್ರಮ ಪ್ರವೇಶ ಪಡೆದಿದ್ದಾರೆ.
ಐಎಎಸ್ ಅಧಿಕಾರಿಗಳು ಹೇಗಿರಬೇಕೆಂದರೆ…. ನಮ್ಮ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಸ್ಥಾನ ಮಂತ್ರಿಗಳಾಗಿದ್ದ ‘ತಿಮ್ಮರಸು’ ಅವರಂತಿರಬೇಕು.