ಜುಲೈ ಅಂತ್ಯದಿಂದ ತೊಗರಿ ಬೇಳೆ, ಕಡ್ಳೆ ಬೇಳೆ ಮತ್ತು ಉದ್ದಿನಬೇಳೆ ಸೇರಿದಂತೆ ಪ್ರಮುಖ ಬೇಳೆಕಾಳುಗಳ ಬೆಲೆಗಳು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಹೇಳಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತಮ ಮಾನ್ಸೂನ್ ಮಳೆಯಾಗುತ್ತಿದೆ ಮತ್ತು ಬೇಳೆಕಾಳುಗಳ ಆಮದು ಕೂಡ ಹೆಚ್ಚಿದ್ದು, ಬೇಡಿಕೆಗೆ ತಕ್ಕಷ್ಟು ಲಭ್ಯತೆ ಇರಲಿದೆ. ಹೀಗಾಗಿ, ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಶುಕ್ರವಾರದಂದು ತೊಗರಿ ಬೇಳೆಯ ಚಿಲ್ಲರೆ ದರವು ಕೆಜಿಗೆ 160 ರೂ.ಗಳಷ್ಟಿತ್ತು. ಇದು ಕಳೆದ ವರ್ಷದ ಕೆಜಿಗೆ 126.61 ರೂ.ಗೆ ಹೋಲಿಸಿದರೆ ಶೇ.26.66 ರಷ್ಟು ಹೆಚ್ಚಾಗಿದೆ.
ಅದೇ ರೀತಿ, ಒಂದು ವರ್ಷದ ಹಿಂದಿನ ಬೆಲೆಗೆ ಹೋಲಿಸಿದರೆ, ಕಡ್ಳೆ ಬೇಳೆ ಮತ್ತು ಉದ್ದಿನ ಬೇಳೆ ಚಿಲ್ಲರೆ ಬೆಲೆಗಳು ಕ್ರಮವಾಗಿ ಶೇ.17.21 ಮತ್ತು ಶೇ.13.30 ರಷ್ಟು ಹೆಚ್ಚಾಗಿದೆ.
ಬೇಳೆಕಾಳುಗಳ ಬೆಲೆ ಏರಿಕೆಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲು ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಬೆಲೆ ಏರಿಕೆ ಪ್ರಮುಖ ಚರ್ಚಾ ವಿಷಯವೂ ಆಗಿತ್ತು.