ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ರೆಕಾರ್ಡಿಂಗ್ ಅನ್ನು ಅವರ ಪತ್ನಿ ಸುನಿತಾ ಕೇಜ್ರಿವಾಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು ಈ ವಿಡಿಯೋಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಹಾಗೆಯೇ ವಿಡಿಯೋಗೆ ಲಿಂಕ್ ಮಾಡಿದ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ದೆಹಲಿ ಮೂಲದ ವಕೀಲ ವೈಭವ್ ಸಿಂಗ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ನೋಟಿಸ್ ಜಾರಿ ಮಾಡಿದೆ.
ಒಟ್ಟು ಐವರಿಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೋರ್ಟ್ ಸೂಚನೆ ನೀಡಿದ್ದು ಈ ಐವರಲ್ಲಿ ಸುನಿತಾ ಒಬ್ಬರಾಗಿದ್ದಾರೆ. ನ್ಯಾಯಾಲಯವು ಜುಲೈ 9ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ನಡೆಸಲಿದೆ.
ಇದನ್ನು ಓದಿದ್ದೀರಾ? ಅಬಕಾರಿ ಹಗರಣದಲ್ಲಿ ಹಣ ಎಲ್ಲಿಂದ ಬಂತು ಎಂಬುದನ್ನು ಕೇಜ್ರಿವಾಲ್‌ರಿಂದ ನಾಳೆ ಬಹಿರಂಗ: ಪತ್ನಿ ಸುನಿತಾ
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಮಾರ್ಚ್ 28ರಂದು ಎರಡನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದಾಗ ಅರವಿಂದ್ ಕೇಜ್ರಿವಾಲ್ ವಿಶೇಷ ನ್ಯಾಯಾಧೀಶ (ಪಿಸಿ ಕಾಯಿದೆ) ಕಾವೇರಿ ಬವೇಜಾ ಅವರನ್ನು ವೈಯಕ್ತಿಕವಾಗಿ ಉದ್ದೇಶಿಸಿ ಮಾತನಾಡಿದ್ದರು.
ಇದರ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸುನಿತಾ ಕೇಜ್ರಿವಾಲ್ ದೃಶ್ಯಗಳನ್ನು ರಿಟ್ವೀಟ್ ಮಾಡಿದ್ದರು. ಇನ್ನು ಈ ವಿಡಿಯೋವನ್ನು ತೆಗೆದುಹಾಕುವಂತೆ ಎಕ್ಸ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ದೆಹಲಿ ಹೈಕೋರ್ಟ್ ತಿಳಿಸಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಕಳುಹಿಸಿದ ಒಂಬತ್ತು ಸಮನ್ಸ್‌ಗಳನ್ನು ನಿರ್ಲಕ್ಷಿಸಿದ ನಂತರ ಮಾರ್ಚ್ 21ರಂದು, ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ. ಅದಾದ ಬಳಿಕ ಅರವಿಂದ್ ಕೇಜ್ರಿವಾಲ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್: ಜೂ.19ರವರೆಗೆ ಕಸ್ಟಡಿಗೆ
ನಂತರ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೇಜ್ರಿವಾಲ್‌ಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆಯ ಸಮಯದಲ್ಲಿ ಅವರ ಆಮ್ ಆದ್ಮಿ ಪಕ್ಷದ ಪ್ರಚಾರಕ್ಕೆ ಅವಕಾಶ ನೀಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅವರು ಜೂನ್ 2ರಂದು ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾಗಿದ್ದಾರೆ. ಮಾಜಿ ಅಧಿಕಾರಿಯಾಗಿದ್ದ ಸುನಿತಾ ಕೇಜ್ರಿವಾಲ್ ಅವರೂ ಲೋಕಸಭೆ ಚುನಾವಣೆಯಲ್ಲಿ ಎಎಪಿ ಪರ ವ್ಯಾಪಕ ಪ್ರಚಾರ ಮಾಡಿದ್ದರು. ಆದರೆ ದೆಹಲಿಯಲ್ಲಿ ಎಎಪಿ ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ.