ಮಹಾರಾಷ್ಟ್ರದ ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ ಯುವತಿಯ ಅತ್ಯಾಚಾರ ನಡೆಸಿದ ಆರೋಪಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಆರೋಪಿಯ ಸುಳಿವು ನೀಡಿದವರಿಗೆ ಪೊಲೀಸರು ಒಂದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಅತಿದೊಡ್ಡ ಬಸ್ ಜಂಕ್ಷನ್‌ಗಳಲ್ಲಿ ಸ್ವರ್ಗೇಟ್ ಒಂದಾಗಿದೆ. ಈ ಬಸ್ ನಿಲ್ದಾದಣದಲ್ಲಿ 26 ವರ್ಷದ ಯುವತಿ ಬಸ್‌ಗಾಗಿ ಕಾಯುತ್ತಿದ್ದಾಗ ಆರೋಪಿ ಬಂದು ಯುವತಿ ಕಾಯುವ ಬಸ್ ಬೇರೆ ಪ್ಲಾಟ್‌ಫಾರ್ಮ್‌ನಲ್ಲಿದೆ ಎಂದು ಸುಳ್ಳು ಹೇಳಿ ಕರೆದೊಯ್ದು ಬಸ್‌ನಲ್ಲಿ ಅತ್ಯಾಚಾರ ಎಸಗಿದ್ದನು. ಆರೋಪಿಯನ್ನು ದತ್ತಾತ್ರಯ ರಾಮದಾಸ್ ಗಡೆ (36) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಈಗಾಗಲೇ ಕಳ್ಳತನಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪುಣೆ | ಜನನಿಬಿಡ ಪ್ರದೇಶದಲ್ಲಿ ಬಸ್‌ನೊಳಗೆ ಯುವತಿ ಮೇಲೆ ಅತ್ಯಾಚಾರ; ಆರೋಪಿ ಪರಾರಿ
ಆರೋಪಿಯು ಜನನಿಬಿಡ ಪ್ರದೇಶದಲ್ಲಿಯೇ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಯುವತಿ ತನ್ನ ಸ್ನೇಹಿತನ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಿಸಿಟಿವಿಯಲ್ಲಿ ಆರೋಪಿ ಯುವತಿಯನ್ನು ಕರೆದೊಯ್ಯುತ್ತಿರುವುದು ಕಂಡುಬಂದಿದ್ದು, ಸದ್ಯ ಆರೋಪಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಆತನ ಬಂಧನಕ್ಕೆ ಸಹಾಯ ಮಾಡಿದವರಿಗೆ ಅಥವಾ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.
ಈಗಾಗಲೇ ಪೊಲೀಸರು ಆರೋಪಿಯ ಪತ್ತೆಗಾಗಿ ಸುಮಾರು 13 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಪೈಕಿ ಎಂಟು ತಂಡಗಳು ಅಪರಾಧ ವಿಭಾಗದ ಅಧಿಕಾರಿಗಳನ್ನು ಒಳಗೊಂಡಿದೆ. ಆರೋಪಿಯ ಕುಟುಂಬಸ್ಥರು ಮತ್ತು ಸಹೋದರನ ವಿಚಾರಣೆ ನಡೆಸಿದ್ದಾರೆ.
ಜನನಿಬಿಡ ಪ್ರದೇಶದಲ್ಲಿಯೇ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದಾದರೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ? ಮಹಿಳೆಯರು ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿಲ್ಲ. ಇನ್ನು ಬಸ್, ರೈಲು, ಇತರೆ ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ. ಈ ಕಾಮಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
