ಕಾರ್ಪೋರೇಟ್ ಸಂಸ್ಥೆಯೊಂದರ ಪುಣೆ ಮೂಲದ ಉದ್ಯೋಗಿಯೊಬ್ಬರು ಬರೋಬ್ಬರಿ ಶೇಕಡ 40ರಷ್ಟು ಸಂಬಳ ಹೆಚ್ಚಳದೊಂದಿಗೆ ಬೆಂಗಳೂರಿನಲ್ಲಿ ಉದ್ಯೋಗ ಪಡೆದಿದ್ದಾರೆ. ಒಂದೆರಡು ಲಕ್ಷವಲ್ಲ ವಾರ್ಷಿಕ 25 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇಷ್ಟು ಕೈತುಂಬ ಸಂಬಳ ಸಿಕ್ಕರೂ ಬೆಂಗಳೂರಿಗೆ ಬಂದು ತಪ್ಪು ಮಾಡಿದೆ ಎನ್ನುತ್ತಾರೆ ಈ ವ್ಯಕ್ತಿ. ಬೆಂಗಳೂರಿಗೆ ವರ್ಗಾವಣೆಯನ್ನು ಆಯ್ದುಕೊಂಡ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಪುಣೆ ಮೂಲದ ವ್ಯಕ್ತಿಯೊಬ್ಬರು ಶೇಕಡ 40ರಷ್ಟು ಸಂಬಳ ಹೆಚ್ಚಳದೊಂದಿಗೆ ಉದ್ಯೋಗದ ಆಫರ್ ಪಡೆದು ಬೆಂಗಳೂರಿಗೆ ಬಂದ ಒಂದು ವರ್ಷದಲ್ಲೇ ತನ್ನ ನಿರ್ಧಾರದಿಂದ ಬೇಸತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಲಿಂಕ್ಡಿನ್‌ನಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ಈ ವ್ಯಥೆಯನ್ನು ಬರೆದುಕೊಂಡಿದ್ದು, ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಬಸ್, ಮೆಟ್ರೋ ಬೆನ್ನಲ್ಲೇ ಆಟೋ ಪ್ರಯಾಣವೂ ದುಬಾರಿ: ಖಾಸಗಿ ವಾಹನ ಬಳಕೆ – ಟ್ರಾಫಿಕ್ ಹೆಚ್ಚಳ ನಿಶ್ಚಿತ
ಪೋಸ್ಟ್ ಪ್ರಕಾರ ಈ ವ್ಯಕ್ತಿಗೆ ಪುಣೆಯಲ್ಲಿ ವಾರ್ಷಿಕ 18 ಲಕ್ಷ ರೂಪಾಯಿ ವೇತನವಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ವಾರ್ಷಿಕ 25 ಲಕ್ಷ ರೂಪಾಯಿ ಪ್ಯಾಕೇಜ್‌ನ ಆಫರ್ ಸಿಕ್ಕಿದೆ. ಈಗ ವ್ಯಕ್ತಿ ಬೆಂಗಳೂರಿನ ಹೊಸ ಉದ್ಯೋಗಕ್ಕೆ ಸೇರಿಕೊಂಡು ವರ್ಷವಾಗಿದೆ. ಆದರೆ ಬೆಂಗಳೂರಿನ ಬದುಕು ಸಾಕಾಗಿರುವುದಾಗಿ ತನ್ನ ಸ್ನೇಹಿತನಿಗೆ ಹೇಳಿಕೊಂಡಿದ್ದಾರೆ.
“ನಾನು ಈ ಬೆಂಗಳೂರಿಗೆ ಬರಲೇಬಾರದಿತ್ತು. ಪುಣೆಯಲ್ಲಿ ಎಲ್ಲವೂ ಚೆನ್ನಾಗಿತ್ತು. ಬೆಂಗಳೂರಿನಲ್ಲಿ ಬದುಕಲು ವಾರ್ಷಿಕ 25 ಲಕ್ಷ ರೂಪಾಯಿ ವೇತನ ಸಾಲದೇ ಸಾಲದು” ಎಂಬ ತನ್ನ ಸ್ನೇಹಿತನ ಅಳಲಿಗೆ, “ಏನು ಹೇಳುತ್ತಿದ್ದೀ? ಶೇಕಡ 40ರಷ್ಟು ವೇತನ ಹೆಚ್ಚಳ ಪಡೆದಿದ್ದೀ. ಹಾಗೆ ನೋಡಿದರೆ ಹೆಚ್ಚು ಹಣ ಉಳಿಸುವುದು ಸಾಧ್ಯ. ವಾಪಸು ಬರಬೇಕೆಂದಿದ್ದೀಯಾ…” ಎಂದು ಅಚ್ಚರಿಯಿಂದ ಪ್ರಶ್ನಿಸಿರುವುದಾಗಿ ಲಿಂಕ್ಡಿನ್ ಪೋಸ್ಟ್‌ನಲ್ಲಿ ಬರೆಯಲಾಗಿದೆ.
“ನನ್ನ ವೇತನ ಹೆಚ್ಚಾಗಿದ್ದರೂ ಬೆಂಗಳೂರು ಜೀವನ ಅತೀ ದುಬಾರಿ. ಈ ವೇತನ ಬೆಂಗಳೂರಿನಲ್ಲಿ ಕೇವಲ ಕಡಲೆಕಾಯಿಗೆ ಸಮಾನ. ಇಲ್ಲಿನ ಮನೆ ಬಾಡಿಗೆ ಭಾರೀ ದುಬಾರಿ. ಬಾಡಿಗೆದಾರರನ್ನು ದೋಚಲಾಗುತ್ತದೆ, ಮೂರು ನಾಲ್ಕು ತಿಂಗಳ ಬಾಡಿಗೆಯನ್ನು ಮುಂಗಡ ಡೆಪಾಸಿಟ್ ಆಗಿ ಕೇಳುತ್ತಾರೆ. ಸಂಚಾರದಟ್ಟಣೆ (ಟ್ರಾಫಿಕ್) ಘೋರ ಭೀಕರ. ಬೆಂಗಳೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಬದುಕುವುದೇ ಒಂದು ಅದೃಷ್ಟ” ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ “ಪುಣೆಯಲ್ಲಿ ಕೇವಲ 15 ರೂಪಾಯಿಗೆ ವಡಾ ಪಾವ್ ಸಿಗ್ತದೆ. ಅಲ್ಲಿನ ಜೀವನವೆಚ್ಚವೂ ಕಡಿಮೆ ಮತ್ತು ಉಳಿತಾಯವನ್ನೂ ತಕ್ಕ ಮಟ್ಟಿಗೆ ಮಾಡಬಹುದಿತ್ತು. ಖುಶಿಯಾಗಿರಬಹುದಿತ್ತು” ಎಂದಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹೌದು ಬೆಂಗಳೂರಿನಲ್ಲಿ ಜೀವನ ಕಷ್ಟ ಎಂದು ಹೇಳಿದರೆ, ಇನ್ನು ಕೆಲವರು ಖರ್ಚುವೆಚ್ಚಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಉಳಿತಾಯ ಅವಲಂಬಿಸಿದೆ ಎಂದಿದ್ದಾರೆ. ಇನ್ನು ಕೆಲವರು 25 ಲಕ್ಷ ರೂಪಾಯಿ ಆದಾಯ ಕೇವಲ ಕಡಲೆಕಾಯಿಗೆ ಸಮಾನವೇ ಎಂದು ಸೋಜಿಗಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರ ಅಹೋರಾತ್ರಿ ಧರಣಿ
ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು ತನ್ನ ಅನುಭವವನ್ನು ಹೀಗೆ ಹೇಳಿಕೊಂಡಿದ್ದಾರೆ. “ಎಂಟು ವರ್ಷದಿಂದ ಪುಣೆಯಲ್ಲಿ ಜೀವಿಸುತ್ತಿದ್ದೇನೆ. ದೈನಂದಿ ನ ಬದುಕು ಸಂತುಲಿತವಾಗಿತ್ತು, ಉತ್ತಮವಾಗಿತ್ತು. ಬೆಂಗಳೂರಿಗೆ ಬಂದು ಎರಡು ವರ್ಷವಾಗಿದೆ. ಪುಣೆಗೂ ಬೆಂಗಳೂರಿಗೂ ವಾತಾವರಣ ಹೇಗೆ ಭಿನ್ನವಾಗಿರುತ್ತದೆ ಎಂಬುದು ನನಗೆ ಈಗ ತಿಳಿಯುತ್ತಿದೆ. ಸಂಚಾರದಟ್ಟಣೆ, ಅಧಿಕ ಬಾಡಿಗೆ, ಇತರೆ ಖರ್ಚುಗಳು ವೇತನ ಹೆಚ್ಚಳವನ್ನು ನುಂಗಿ ಹಾಕುತ್ತವೆ. ಪುಣೆಯ ವಾಸ ಮನೆಯಂತೆ ಭಾಸವಾಗುತ್ತದೆ. ಪುಣೆಯ ಜೀವನವೆಚ್ಚ ಅಗ್ಗ. ಅಧಿಕ ಸಂಬಳವು ಉತ್ತಮ ಜೀವನಶೈಲಿಯ ಗ್ಯಾರಂಟಿ ಎಂದು ಅರ್ಥವಲ್ಲ” ಎಂದು ಬರೆದುಕೊಂಡಿದ್ದಾರೆ.
ಆದರೆ ಬೆಂಗಳೂರು ಪರವಾಗಿ ಬ್ಯಾಟ್ ಬೀಸಿರುವ ವ್ಯಕ್ತಿಯೊಬ್ಬರು, “ನಾನು ಕೇವಲ ಕಡಲೆಕಾಯಿಯಷ್ಟೇ ಸಂಪಾದನೆ ಮಾಡುತ್ತೇನೆ. ಆದರೂ ಬೆಂಗಳೂರಿನಲ್ಲಿ ಖುಶಿಯಾಗಿದ್ದೇನೆ. ಬ್ರೋ, ಎಲ್ಲವೂ ನಾವು ಖರ್ಚನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಅದಕ್ಕಾಗಿ ಬೆಂಗಳೂರನ್ನು ಯಾಕೆ ಟೀಕೆ ಮಾಡ್ತೀರಿ” ಎಂದಿದ್ದಾರೆ.
ಬೆಂಗಳೂರು ಪರವಾಗಿ ಪೋಸ್ಟ್ ಮಾಡಿರುವ ಮತ್ತೊಬ್ಬರು, “ಹೌದು, ಬೆಂಗಳೂರು ದುಬಾರಿ. ಆದರೆ ವಾರ್ಷಿಕ 25 ಲಕ್ಷ ರೂಪಾಯಿ ವೇತನವನ್ನು ಕೇವಲ ಕಡಲೆಕಾಯಿಗೆ ಹೋಲಿಸಿದ್ದು ಕೊಂಚ ಅತಿಶಯದಂತಿದೆ. ಇಲ್ಲಿ ಬಾಡಿಗೆ- ಮುಂಗಡ ಠೇವಣಿ ಅಧಿಕ ಹೌದು. ಸಂಚಾರದಟ್ಟಣೆಯನ್ನು ಸಿಂಹಸ್ವಪ್ನವೇ ಹೌದು. ಆದರೆ ಬೆಂಗಳೂರು ಹಲವು ಅವಕಾಶಗಳನ್ನು, ಅನುಭವಗಳನ್ನು ನೀಡುವ ಮಹಾನಗರವಾಗಿದೆ. ಇಲ್ಲಿ ಅತಿ ಕಡಿಮೆ ಆದಾಯದಲ್ಲಿಯೂ ಜನರು ಆರಾಮವಾಗಿ ಬದುಕುತ್ತಾರೆ. ನಿಮ್ಮ ಮಿತ್ರ ಬೆಂಗಳೂರನ್ನು ದೂಷಿಸುವ ಬದಲಾಗಿ ಮಾಸಿಕ ವೆಚ್ಚವನ್ನು ಸರಿಯಾಗಿ ನಿಭಾಯಿಸುವ ಕೌಶಲ್ಯ ಕಲಿಯಲಿ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಬೆಲೆ ಏರಿಕೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಮುಷ್ಕರ
ಹೀಗೆ ಕೆಲವರು ಬೆಂಗಳೂರು ಪರವಾಗಿ, ಕೆಲವರು ಬೆಂಗಳೂರು ವಿರುದ್ಧವಾಗಿ ಕಾಮೆಂಟ್ ಮಾಡಿದ್ದಾರೆ. ವಡಾ ಪಾವ್ ವಿನಾ ಪುಣೆಯಲ್ಲಿ ಎಲ್ಲವೂ ದುಬಾರಿ. ಪುಣೆಯ ಜೀವನವೂ ದುಬಾರಿಯೇ. ಯಾವ ನಗರವಾದರೇನು ಜೀವನವೇ ದುಬಾರಿಯಾಗಿ ಹೋಗಿದೆ ಎನ್ನುವವರೂ ಇದ್ದಾರೆ. ವಾರ್ಷಿಕ 25 ಲಕ್ಷ ರೂಪಾಯಿ ವೇತನ ಪಡೆದು ನೀವು ಹೀಗೆ ಹೇಳುವುದಾದರೆ ವಾರ್ಷಿಕ 3 ಲಕ್ಷ ರೂಪಾಯಿಯನ್ನೂ ಗಳಿಸದಿರುವ ನಾವು ಏನು ಹೇಳೋಣ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ದಿನನಿತ್ಯ ಬಳಸುವ ಈರುಳ್ಳಿ, ಟೊಮೆಟೊ, ಹಾಲಿನಿಂದ ಹಿಡಿದು, ಅಕ್ಕಿ, ಗೋಧಿ, ಬೇಳೆ, ಎಣ್ಣೆ ದರಗಳು ಗಗನಕ್ಕೆ ಜಿಗಿದಿವೆ. ಜಮೀನಿನ ಬೆಲೆ ಕೂಡ ಕೈಗೆಟುಕದಾಗಿದೆ. ಈ ಏರಿಕೆಗಳಿಗೆ ಸಮನಾಗಿ ವೇತನ ಹೆಚ್ಚಳವಾಗುತ್ತಿಲ್ಲ. ಇತ್ತೀಚೆಗೆ PwC ಮತ್ತು Perfios ಎಂಬ ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ಭಾರತೀಯರು ತಮ್ಮ ವೇತನದ ಮೂರನೇ ಒಂದು ಭಾಗದಷ್ಟು ಮೊತ್ತವನ್ನು EMI ಪಾವತಿಸಲು ವಿನಿಯೋಗಿಸುತ್ತಿದ್ದಾರೆ. ಆದರೆ ಉಳಿತಾಯ ಪಾತಾಳಕ್ಕಿಳಿದಿದೆ. ಈ ಬೆಲೆ ಏರಿಕೆಗೆ ರಾಜ್ಯ ರಾಜ್ಯಗಳ ನಡುವಿನ ಗಡಿ ರೇಖೆಯೇ ಅಳಿಸಿಹೋಗಿದೆ ಎನ್ನುತ್ತಿವೆ ಸಂಶೋಧನಾ ವರದಿಗಳು. ಕೆಲವೆಡೆ ಖರ್ಚು ಕೊಂಚ ಕಡಿಮೆಯಾಗಿರಬಹುದು, ಕೆಲವೆಡೆ ಹೆಚ್ಚಿರಬಹುದು. ಆದರೆ ಗಳಿಕೆ ಮತ್ತು ವೆಚ್ಚದ ನಡುವೆ ನೆಲ ಮತ್ತು ಮುಗಿಲಿನ ಅಂತರವಿದೆ ಎಂಬುದು ತಜ್ಞರ ಅಭಿಪ್ರಾಯ.
