ಪುಣೆ ಕಾರು ಅಪಘಾತದಲ್ಲಿ ಬಂಧಿತನಾಗಿದ್ದ ಅಪ್ರಾಪ್ತ ಬಾಲಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು. ಬಿಡುಗಡೆಗೆ ಆದೇಶಿಸಿದೆ. ಬಾಲಾಪರಾಧಿ ನ್ಯಾಯಮಂಡಳಿ ಆದೇಶವನ್ನು ಅಕ್ರಮ ಎಂದು ಕೋರ್ಟ್ ವಜಾಗೊಳಿಸಿದೆ.
ಅಪ್ರಾಪ್ತನ ಪೋಷಕರು ಹಾಗೂ ತಾತ ಸೆರೆಮನೆಯಲ್ಲಿರುವ ಕಾರಣ ಬಾಲಕನ ಪಾಲನೆಯ ನಿರ್ವಹಣೆಯನ್ನು ಸಂಬಂಧಿಕರಿಗೆ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಭಾರತಿ ದಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರಿದ್ದ ಪೀಠವು ಬಾಲಕನಿಗೆ ಜಾಮೀನು ನೀಡಿದ್ದು, ಅಪಘಾತವು ಗಂಭೀರವಾದರೂ ಆತನನ್ನು ಬಾಲಾಪರಾಧಿಗಳ ಕಾರಾಗೃಹದಲ್ಲಿ ಇಡುವಂತಿಲ್ಲ ಎಂದು ತಿಳಿಸಿದೆ.
ಮೇ ತಿಂಗಳಿನಲ್ಲಿ 17 ವರ್ಷದ ಅಪ್ತಾಪ್ತ ಬಾಲಕ ದುಬಾರಿ ಪೋರ್ಷ್ ಕಾರಿನಲ್ಲಿ ಅಪಘಾತ ಮಾಡಿದ ಕಾರಣ ಒರ್ವ ಬೈಕ್ ಸವಾರ ಹಾಗೂ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಮೃತಪಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೇ ಅಸ್ತ್ರ ಮತ್ತು ಗುರಾಣಿ
ಅಪಘಾತ ನಡೆದ ದಿನದಂದೆ ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದ. ಈತನನ್ನು ರಸ್ತೆ ಸುರಕ್ಷತೆಯ ಬಗ್ಗೆ 300 ಪದಗಳ ಪ್ರಬಂಧ ಬರೆಯುವ ಷರತ್ತಿನೊಂದಿಗೆ ಆತನ ಪೋಷಕರು ಹಾಗೂ ಅಜ್ಜನ ಮೇಲ್ವಿಚಾರಣೆಗೆ ವಹಿಸಲಾಗಿತ್ತು.
ನಂತರದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾದ ನಂತರ ಬಾಲಕನ ಜಾಮೀನು ಅರ್ಜಿಗೆ ತಿದ್ದುಪಡಿ ತರಬೇಕೆಂದು ಪೊಲೀಸರು ಬಾಲಾಫರಾದ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಾಲಕನನ್ನು ಮೇ 22ರಂದು ಕಸ್ಟಡಿಗೆ ಪಡೆದು ಬಾಲಾಪರಾಧಿಗಳ ಗೃಹದಲ್ಲಿ ಇರಿಸಲಾಗಿತ್ತು.
“ನಾವು ಈ ಅರ್ಜಿಯನ್ನು ಪರಿಗಣಿಸಿ ಈತನ ಬಿಡುಗಡೆಗೆ ಆದೇಶಿಸುತ್ತೇವೆ. ಬಾಲಕನ ನಿರ್ವಹಣೆಯನ್ನು ಮಕ್ಕಳ ಅಪರಾಧಿ ಸುರಕ್ಷಾ ಮಂಡಳಿ ಕಾಳಜಿ ವಹಿಸಿ ಅರ್ಜಿದಾರರಾದ ಬಾಲಕನ ಪೋಷಕರಿಗೆ ಒಪ್ಪಿಸಿದೆ. ಬಾಲಾಪರಾಧಿ ನ್ಯಾಯ ಮಂಡಳಿಯ ಆದೇಶ ಅಕ್ರಮವಾಗಿದ್ದು, ನ್ಯಾಯವ್ಯಾಪ್ತಿಯಿಲ್ಲದೆ ಅಂಗೀಕರಿಸಲ್ಪಟ್ಟಿವೆ” ಎಂದು ಕೋರ್ಟ್ ಈ ಸಂದರ್ಭದಲ್ಲಿ ತಿಳಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನ ಪೋಷಕರು ಹಾಗೂ ಆತನ ತಾತನನ್ನು ಅಪಘಾತ, ಸಾಕ್ಷ್ಯಗಳ ನಾಶ, ಮನೆಯ ಚಾಲಕನ ಮೇಲೆ ದಬ್ಬಾಳಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಸೆರೆಮನೆಗೆ ಕಳಿಸಲಾಗಿದೆ.
