1993ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಏಳು ಮಂದಿ ಅಮಾಯಕರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಂದಿನ ಎಸ್‌ಎಸ್‌ಪಿ, ಡಿಎಸ್‌ಪಿ ಸೇರಿದಂತೆ ಐದು ಮಂದಿ ಪೊಲೀಸ್ ಅಧಿಕಾರಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ. ಬದಲಾಗಿ, ಅವರಿಗೆ ಅಮರಣಾಂತ ಜೈಲು ಶಿಕ್ಷೆ ವಿಧಿಸಿ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿಗಳಾದ ನಿವೃತ್ತ ಎಸ್ಎಸ್‌ಪಿ ಭೂಪೀಂದರ್ಜಿತ್ ಸಿಂಗ್, ಮಾಜಿ ಡಿವೈಎಸ್‌ಪಿ ದವೀಂದರ್ ಸಿಂಗ್, ಮಾಜಿ ಇನ್‌ಪೆಕ್ಟರ್ ಸುಬಾ ಸಿಂಗ್, ಎಎಸ್ಐ ಗುಲ್ಬರ್ಗ್ ಸಿಂಗ್ ಹಾಗೂ ರಘುಬೀರ್ ಸಿಂಗ್ ವಯಸ್ಸಿನ ಕಾರಣದಿಂದಾಗಿ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ. ಅಮರಣಾಂತ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಪಂಜಾಬ್‌ನ ಮೊಹಾಲಿಯಲ್ಲಿ ಈ ಐವರು ಅಪರಾಧಿ ಅಧಿಕಾರಿಗಳು 1993ರಲ್ಲಿ 7 ಮಂದಿ ಅಮಾಯಕರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆಗೈದಿದ್ದರು. ಅವರ ವಿರುದ್ಧ ನಕಲಿ ಎನ್‌ಕೌಂಟರ್ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಲ್ಜೀಂದರ್ ಸಿಂಗ್ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ. ಎಲ್ಲ ಅಪರಾಧಿಗಳಿಗೆ ತಲಾ 3.5 ಲಕ್ಷ ರೂ. (ಒಟ್ಟು 17.5 ಲಕ್ಷ ರೂ.) ದಂಡ ವಿಧಿಸಿದ್ದಾರೆ. ಈ ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ಸಮವಾಗಿ ಹಂಚಿಕೆ ಮಾಡುವಂತೆ ಸೂಚಿಸಿದ್ದಾರೆ.
ಅಪರಾಧಗಳು ತಮ್ಮ ವಯಸ್ಸು ಮತ್ತು ಆರೋಗ್ಯ ಕಾರಣಗಳನ್ನು ನೀಡಿ, ಶಿಕ್ಷೆಯಲ್ಲಿ ವಿನಾಯತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. “ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು. ಆದರೆ, ಅಪರಾಧಿಗಳು 60ರಿಂದ 80 ವರ್ಷ ವಯಸ್ಸಿನಲ್ಲಿದ್ದಾರೆ. ಈ ವಯಸ್ಸಿನ ಕಾರಣದಿಂದಾಗಿ ನೇಣು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಆದಾಗ್ಯೂ, ಅವರ ನೈತಿಕ ವಿವಾಳಿತನ ಮತ್ತು ಅಮಾನವೀಯ ಕೃತ್ಯಗಳಿಗೆ ಯಾವುದೇ ವಿನಾಯತಿ ಇಲ್ಲ” ಎಂದು ಹೇಳಿದೆ. ಅಪರಾಧಿಗಳಿಗೆ ಅಮರಣಾಂತ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಐವರು ಅಪರಾಧಿಗಳು ಅಮರಣಾಂತ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಸಾಯುವವರೆಗೂ ಜೈಲು ಶಿಕ್ಷೆ ಅನುಭವಿಸಲಿದ್ದಾರೆ.