ಕೃಷಿ ಪ್ರಧಾನ ರಾಜ್ಯವಾಗಿರುವ ಪಂಜಾಬ್ ರಾಜ್ಯದಲ್ಲಿ ಈ ಬಾರಿಯ ಭೀಕರ ಮಳೆ ಪ್ರವಾಹಕ್ಕೆ ಅಕ್ಷರಶಃ ನಲುಗಿದೆ. ಈವರೆಗೆ 2300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದರೆ, 55ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಮತ್ತು ನಾಲ್ವರು ಕಣ್ಮರೆಯಾಗಿದ್ದಾರೆ.
ಅಮೃತಸರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಅಮೃತಸರದ ಅಜ್ವಾಲಾದ ಫೋನೆವಾಲ ಗ್ರಾಮಕ್ಕೆ ತೆರಳಿದ ಅವರು, ಪ್ರವಾಹ ಪೀಡಿತ ಜನರನ್ನು ಭೇಟಿಯಾಗಿ ಹಾನಿಯ ಬಗ್ಗೆ ವಿಚಾರಿಸಿದರು.
ರಾಹುಲ್ ಗಾಂಧಿ ಅವರೊಂದಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ಜಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಞಾ ಮತ್ತು ಪಕ್ಷದ ಇತರ ನಾಯಕರು ಇದ್ದರು.
ಪಂಜಾಬ್‌ನ 15 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಪ್ರವಾಹದಿಂದಾಗಿ 56 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ: ಅಮೃತಸರ-7, ಬರ್ನಾಲಾ 5, ಬಟಿಂಡಾ-4, ಹೋಶಿಯಾರ್‌ಪುರ್- 7, ಗುರುದಾಸ್ಪುರ್- 2, ಫಜಿಲ್ಕಾ- 3, ಲುಧಿಯಾನ- 5, ಮಾನ್ಸಾ -5, ಪಠಾಣ್‌ಕೋಟ್- 6, ಪಟಿಯಾಲ-2, ರೂಪನಗರ -2, ಮೊಹಾಲಿ -2 ಮತ್ತು ಸಂಗ್ರೂರ್ -1 ಸಾವು ವರದಿಯಾಗಿದೆ. ಇದಲ್ಲದೆ, ಪಠಾಣ್‌ಕೋಟ್‌ನಲ್ಲಿ 3 ಜನರು ಕಾಣೆಯಾಗಿದ್ದಾರೆ ಮತ್ತು ಜಲಂಧರ್‌ನಲ್ಲಿ ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ.
ಮಾಧ್ಯಮ ಪ್ರಕಟಣೆ ಮಾಹಿತಿ ಪ್ರಕಾರ, ಪಂಜಾಬ್‌ನ 23 ಜಿಲ್ಲೆಗಳ 2384 ಗ್ರಾಮಗಳು ಪ್ರವಾಹದಿಂದ ಸಂಕಷ್ಟ ಅನುಭವಿಸಿವೆ. ಅಮೃತಸರದಲ್ಲಿ 196 ಗ್ರಾಮಗಳು, ಬರ್ನಾಲಾದಲ್ಲಿ 121 ಗ್ರಾಮಗಳು, ಬಟಿಂಡಾದಲ್ಲಿ 21 ಗ್ರಾಮಗಳು, ಫರೀದ್‌ಕೋಟ್‌ನಲ್ಲಿ 15 ಗ್ರಾಮಗಳು, ಫಜಿಲ್ಕಾದಲ್ಲಿ 111 ಗ್ರಾಮಗಳು, ಫಿರೋಜ್‌ಪುರದಲ್ಲಿ 108, ಗುರುದಾಸ್ಪುರದಲ್ಲಿ 343, ಹೋಶಿಯಾರ್‌ಪುರದಲ್ಲಿ 329, ಜಲಂಧರ್‌ನಲ್ಲಿ 93, ಕಪುರ್ತಲಾದಲ್ಲಿ 149, ಲುಧಿಯಾನದಲ್ಲಿ 114, ಮಲೇರ್ಕೋಟ್ಲಾದಲ್ಲಿ 12, ಮಾನ್ಸಾದಲ್ಲಿ 95, ಮೋಗಾದಲ್ಲಿ 78, ಪಠಾಣ್‌ಕೋಟ್‌ನಲ್ಲಿ 88, ಪಟಿಯಾಲಾದಲ್ಲಿ 140, ರೂಪನಗರದಲ್ಲಿ 93, ಮೊಹಾಲಿಯಲ್ಲಿ 15, ನವನ್‌ಶಹರ್‌ನಲ್ಲಿ 28, ಸಂಗ್ರೂರ್‌ನಲ್ಲಿ 107, ಶ್ರೀ ಮುಕ್ತ್ಸರ್ ಸಾಹಿಬ್‌ನಲ್ಲಿ 58 ಮತ್ತು ತರಣ್ ತರಣ್ ಜಿಲ್ಲೆಯಲ್ಲಿ 70 ಗ್ರಾಮಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ.
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಟ್ಲಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಉಂಟಾಗಿದೆ.