ಪುಷ್ಪಾ 2 ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ಅಲ್ಲು ಅರ್ಜುನ್, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸಿನಿಮಾ ತಂಡದ ಜೊತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಭೆ ನಡೆದಿದೆ. ಈ ನಡುವೆ, “ಅಭಿಮಾನಿಗಳ ಜವಾಬ್ದಾರಿ ಸೆಲೆಬ್ರೆಟಿಗಳದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಡಿಸೆಂಬರ್ 4ರಂದು ಹೈದಾರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಉಂಟಾಗಿತ್ತು. ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಭೇಟಿ ನೀಡಿದ್ದು ಅಭಿಮಾನಿಗಳ ದಂಡೇ ಥಿಯೇಟರ್‌ನತ್ತ ಧಾವಿಸಿದೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಸಿದ್ಧವೇ: ಮೋದಿಗೆ ರೇವಂತ್ ರೆಡ್ಡಿ ಪ್ರಶ್ನೆ
ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಬಾಲಕ ಚೇತರಿಸಿಕೊಂಡಿದ್ದು, ಇನ್ನೋರ್ವ ಬಾಲಕನ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ನಟ ಅಲ್ಲು ಅರ್ಜುನ್ ಬಂಧನ, ಬಿಡುಗಡೆ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, “ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಜನಸಂದಣಿಯನ್ನು ನಿಯಂತ್ರಿಸುವುದು ಸೆಲೆಬ್ರಿಟಿಗಳ ಜವಾಬ್ದಾರಿಯಾಗಿದೆ. ಶಾಂತಿ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕಿತ್ತು” ಎಂದಿದ್ದಾರೆ. ಇನ್ನು ಈ ಹಿಂದೆಯೂ ನಟ ಮತ್ತು ಸಿನಿಮಾ ತಂಡವನ್ನು ದೂಷಿಸಿ ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದರು.
ಇಂದು ನಡೆದ ಸಭೆಯಲ್ಲಿ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಮತ್ತು ರಾಜ್ಯದ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದಿಲ್ ರಾಜು ಸೇರಿದಂತೆ ತೆಲುಗು ಚಿತ್ರರಂಗದ ಹಲವು ಪ್ರಮುಖ ಸೆಲೆಬ್ರೆಟಿಗಳು ಭಾಗವಹಿಸಿದ್ದರು.
