ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಪ್ರತಿಭಟಿಸಿದ ಮಹಿಳೆಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಬಗ್ಗೆ ತನಿಖೆಗೆ ವಿಶೇಷಾ ತನಿಖಾ ತಂಡ (ಎಸ್‌ಐಟಿ) ರಚನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು. ಈ ಬಂಧನದ ವೇಳೆ ಮಹಿಳೆಯೋರ್ವರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಎಸ್‌ಐಸಿ ತನಿಖೆಗೆ ಸುಪ್ರೀಂ ಸೋಮವಾರ ಆದೇಶ ನೀಡಿದೆ. ಹಾಗೆಯೇ ಎಲ್ಲಾ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಇದನ್ನು ಓದಿದ್ದೀರಾ? ಕೋಲ್ಕತ್ತಾ ಆರ್‌ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲರ ಮನೆ ಮೇಲೆ ಇಡಿ ದಾಳಿ
ಈ ಹಿಂದೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಕೋಲ್ಕತ್ತಾ ಹೈಕೋರ್ಟ್ ಆದೇಶ ನೀಡಿತ್ತು. ಕೋಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಪೀಠವು ಬದಿಗೊತ್ತಿದೆ. ಹಾಗೆಯೇ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ತನಿಖೆಯನ್ನು ವಹಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಸ್‌ಐಟಿಗೆ ಅಧಿಕಾರಿಗಳ ಹೆಸರುಗಳನ್ನು ರಾಜ್ಯ ಸರ್ಕಾರ ಸಲ್ಲಿಸಬೇಕು. ಎಸ್‌ಐಟಿ ತನಿಖೆಯ ಪ್ರಗತಿಯ ವರದಿಯನ್ನು ವಾರಕ್ಕೊಮ್ಮೆ ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಜೊತೆಗೆ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ವಿಶೇಷ ಪೀಠವನ್ನು ರಚಿಸುವಂತೆ ಸೂಚಿಸಲಾಗಿದೆ. ಎಸ್‌ಐಟಿ ಈ ವಿಶೇಷ ಪೀಠದ ಮುಂದೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ದೂರುದಾರರಾದ ರೆಬೆಕಾ ಖಾತುನ್ ಮೊಲ್ಲಾ ಮತ್ತು ರಾಮ ದಾಸ್ ಅವರನ್ನು ಸೆಪ್ಟೆಂಬರ್ 7ರಂದು ಬಂಧಿಸಲಾಗಿದೆ. ಮರುದಿನ ಡೈಮಂಡ್ ಹಾರ್ಬರ್ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸುವವರೆಗೆ ಡೈಮಂಡ್ ಹಾರ್ಬರ್ ಜಿಲ್ಲೆಯ ಫಾಲ್ಟಾ ಪೊಲೀಸ್ ಠಾಣೆಯ ವಶದಲ್ಲಿಯೇ ಇದ್ದರು ಎಂದು ಹೇಳಲಾಗಿದೆ.
