ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ದೆಹಲಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಾಘವ್ ಚಡ್ಡಾ ಅವರಿಗೆ ಈಗ ಯುವಜನತೆಯಿಂದ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಪಕ್ಷಾಂತರ ಮಾಡಿದ ಕೇವಲ 24 ಗಂಟೆಗಳಲ್ಲೇ ಚಡ್ಡಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ. ಶುಕ್ರವಾರದವರೆಗೆ 1.46 ಕೋಟಿ ಇದ್ದ ಅವರ ಫಾಲೋವರ್ಸ್ ಸಂಖ್ಯೆ ಶನಿವಾರ ಮಧ್ಯಾಹ್ನದ ವೇಳೆಗೆ 1.35 ಕೋಟಿಗೆ ಇಳಿಕೆಯಾಗಿದೆ. ಈ ಕುಸಿತ ನಿರಂತರ ಮುಂದುವರೆದಿದೆ.

ವಿಶೇಷವಾಗಿ ‘ಜೆನ್-ಜಿ’ (Gen-Z) ತಲೆಮಾರಿನ ಯುವಜನತೆ ಚಡ್ಡಾ ಅವರ ಈ ರಾಜಕೀಯ ಬದಲಾವಣೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ‘ಅನ್‌ಫಾಲೋ ರಾಘವ್ ಚಡ್ಡಾ’ ಅಭಿಯಾನ ನಡೆಸುತ್ತಿದ್ದಾರೆ. ಕಳೆದ ಕಲಾಪದಲ್ಲಿ ಪಿತೃತ್ವ ರಜೆ, ಡೇಟಾ ಮಿತಿ ಮತ್ತು ಡೆಲಿವರಿ ಕಾರ್ಮಿಕರ ಸಮಸ್ಯೆಗಳಂತಹ ವಿಷಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಚಡ್ಡಾ ವಿಭಿನ್ನ ನಾಯಕನಾಗಿ ಗುರುತಿಸಿಕೊಂಡಿದ್ದರು. ಆದರೆ, ಬಿಜೆಪಿ ಸೇರಿದ ಬೆನ್ನಲ್ಲೇ ಅವರು ಈ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಮಾಡಿದ್ದ ಟೀಕಾತ್ಮಕ ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.

ಇದನ್ನೂ ಓದಿ: BREAKING NEWS | ಎಎಪಿ ತೊರೆದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್: ಬಿಜೆಪಿ ಸೇರ್ಪಡೆ ಘೋಷಣೆ!
ಈಗಾಗಲೇ ಪ್ರಖ್ಯಾತ ಪರ್ವತಾರೋಹಿ ರೋಹ್ತಾಸ್ ಖಿಲೇರಿ ಸೇರಿದಂತೆ ಅನೇಕ ಪ್ರಮುಖರು ಅವರನ್ನು ಅನ್‌ಫಾಲೋ ಮಾಡಿದ್ದು, “ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಹೀರೊ ಮಾಡಬಲ್ಲದು, ಅದೇ ರೀತಿ ಶೂನ್ಯಕ್ಕೂ ತಳ್ಳಬಲ್ಲದು” ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸದಾ ಅಂಕಿ-ಅಂಶಗಳ ಮೇಲೆ ಮಾತನಾಡುವ ರಾಘವ್ ಚಡ್ಡಾ, ಈಗ ತಮ್ಮದೇ ಫಾಲೋವರ್ಸ್‌ಗಳ ಕುಸಿತದ ಈ ‘ಡೇಟಾ’ವನ್ನು ಹೇಗೆ ಅರಗಿಸಿಕೊಳ್ಳುತ್ತಾರೆ ಮತ್ತು ಮುಂದಿನ ದಿನಗಳಲ್ಲಿ ಯುವಜನತೆಯ ಮನಸ್ಸನ್ನು ಹೇಗೆ ಗೆಲ್ಲುತ್ತಾರೆ ಎಂಬುದು ಸದ್ಯದ ಕುತೂಹಲ.





