ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ (ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಗ್ರಂಥಿ) ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದೇನೆ. ಸಣ್ಣ ಗೆಡ್ಡೆ ಪತ್ತೆಯಾಗಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
76 ವರ್ಷದ ನೆತನ್ಯಾಹು ತಮ್ಮ ವೈದ್ಯಕೀಯ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ವೈದ್ಯರು ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಗೆಡ್ಡೆಯನ್ನು ಕಂಡುಹಿಡಿದು ಚಿಕಿತ್ಸೆ ನೀಡಿದ್ದಾರೆ. ಆ ಸಮಯದಲ್ಲಿ ಮಾಹಿತಿಯನ್ನು ಪ್ರಕಟಿಸಲಾಗಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್‌ಗೆ ಅಮೆರಿಕವನ್ನು ನಾಶ ಮಾಡುವ ಗುರಿ ಇದೆ: ನೆತನ್ಯಾಹು ಆರೋಪ
“ಇರಾನ್ ವಿರುದ್ಧದ ಯುದ್ಧದ ನಡುವೆ ಇಸ್ರೇಲ್ ವಿರುದ್ಧ ಹೆಚ್ಚಿನ ಸುಳ್ಳು ಪ್ರಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನನಗೆ ಕ್ಯಾನ್ಸರ್ ಬಂದ ಮಾಹಿತಿಯನ್ನು ನೀಡಿಲ್ಲ. ಈ ಮಾಹಿತಿಯನ್ನು ಎರಡು ತಿಂಗಳುಗಳ ನಂತರ ಬಿಡುಗಡೆ ಮಾಡುವಂತೆ ನಾನು ವಿನಂತಿಸಿದೆ” ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ 2024ರಲ್ಲಿ ಪ್ರಾಸ್ಟೇಟ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ನಿಯಮಿತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಇತ್ತೀಚೆಗೆ ತಪಾಸಣೆ ನಡೆಸಿದಾಗ ಸಣ್ಣ ಗೆಡ್ಡೆ ಪತ್ತೆಯಾಗಿದೆ ಎಂದು ವರದಿಯಾಗಿದೆ.
ನೆತನ್ಯಾಹುಗೆ ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಇಸ್ರೇಲ್ ಪ್ರಧಾನಿ ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿದೆ. ಆದರೆ ಚಿಕಿತ್ಸೆ ಯಾವಾಗ ನಡೆಯಿತು ಎಂಬ ಬಗ್ಗೆ ವೈದ್ಯಕೀಯ ವರದಿಯಾಗಲಿ ಅಥವಾ ನೆತನ್ಯಾಹು ಆಗಲಿ ಮಾಹಿತಿ ನೀಡಿಲ್ಲ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಡಸ್ಸಾ ಆಸ್ಪತ್ರೆಯ ಆಂಕೊಲಾಜಿ ಘಟಕದ ನಿರ್ದೇಶಕ ಅಹರಾನ್ ಪೊಪೊವ್ಟ್ಸರ್, “ನೆತನ್ಯಾಹು ಅವರಿಗೆ ಆರಂಭಿಕ ಹಂತದಲ್ಲಿಯೇ ರೋಗನಿರ್ಣಯ ಮಾಡಲಾಗಿದೆ. ಅವರ ವಯಸ್ಸಿನ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದೆ” ಎಂದು ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ನಡೆಸಿದ ಬಳಿಕ ನೆತನ್ಯಾಹು ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡಿದ್ದವು. ಕೆಲವು ಮಾಧ್ಯಮಗಳು ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿತ್ತು. ನಕಲಿ, ಎಐ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಈ ವದಂತಿಗೆ ತೆರೆ ಎಳೆಯಲು ನೆತನ್ಯಾಹು ಮಾರ್ಚ್‌ನಲ್ಲಿ ಜೆರುಸಲೆಮ್ ಕೆಫೆಗೆ ಭೇಟಿ ನೀಡಿದ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿತ್ತು.





