ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ವಿದ್ಯಾರ್ಥಿಗಳು ಭಾರತದ ಭವಿಷ್ಯ, ಆದರೆ ನರೇಂದ್ರ ಮೋದಿ ಅವರು ದೇಶದ ಗತಕಾಲ (ಹಳೆಯ ಅಧ್ಯಾಯ). ಗತಕಾಲವು ಎಂದಿಗೂ ಭವಿಷ್ಯದ ವಿರುದ್ಧ ಹೋರಾಡಲು ಸಾಧ್ಯವಿಲ್ಲ,” ಎಂದು ಅವರು ಶನಿವಾರ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಅದ್ವಾನಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ನಿಯೋಗವನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲು ಬಿಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಯುವತಿಯೊಬ್ಬಳು ಸೇರಿದಂತೆ ಹಲವು ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದ ರಾಹುಲ್ ಅವರು, ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಚಿಕ್ಕಮಗಳೂರು | ನೀಟ್ ಹಗರಣ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು; ಮಹೇಶ್ವರಪ್ಪ
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಜಾ ಖಂಡಿತವಾಗಿಯೂ ಆಗಲೇಬೇಕಾದ ಬೇಡಿಕೆ ಎಂದು ಸ್ಪಷ್ಟಪಡಿಸಿದರು. ಧರ್ಮೇಂದ್ರ ಪ್ರಧಾನ್ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸುವ ವರದಿಗಳನ್ನು ತಳ್ಳಿಹಾಕಿದ ಅವರು, “ಶಿಕ್ಷಣ ಸಚಿವರ ರಾಜೀನಾಮೆಯೊಂದೇ ವಿದ್ಯಾರ್ಥಿಗಳ ಏಕೈಕ ಬೇಡಿಕೆಯಾಗಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ,” ಎಂದರು. ಇನ್ನು ಇಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.





