ಕಾಂಗ್ರೆಸ್ನ ಎಲ್ಲ ಹಂತದ ನಾಯಕರು ಮತ್ತು ಕಾರ್ಯಕರ್ತರು ಪಕ್ಷದ ಮೂಲ ಸಿದ್ಧಾಂತಕ್ಕೆ ಬದ್ಧರಾಗಿರಬೇಕು. ಜನಸಾಮಾನ್ಯರಿಗೆ ನ್ಯಾಯ ಕೊಡಿಸಲು ನಿರಂತರವಾಗಿ ಹೋರಾಡಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ನಾಯಕರಿಗೆ ಆಯೋಜಿಸಲಾಗಿದ್ದ 10 ದಿನಗಳ ತರಬೇತಿ ಶಿಬಿರದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಸಮರ ಕಲೆಗಳ ಅಭ್ಯಾಸಿಯಾಗಿರುವ ಅವರು ಕರಾಟೆ ಮತ್ತು ಜಪಾನೀಸ್ ಸಮರ ಕಲೆಯಾದ ‘ಜೂಜುಟ್ಸು’ ಪ್ರದರ್ಶನ ನೀಡಿ ಗಮನ ಸೆಳೆದರು. ಎದುರಾಳಿಯನ್ನು ಎದುರಿಸಲು, ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಈ ಕಲೆ ನೆರವಾಗುತ್ತದೆ ಎಂಬುದನ್ನು ಅವರು ವಿವರಿಸಿದರು.
ಶಿಬಿರ ಕುರಿತು ಮಾತನಾಡಿದ ಕಾಂಗ್ರೆಸ್ ಕಾರ್ಯಾಕಾರಿ ಮಂಡಳಿ (CWC) ಸದಸ್ಯ ಆರಿಫ್ ನಸೀಮ್ ಖಾನ್ ಮಾತನಾಡಿ, “ರಾಹುಲ್ ಗಾಂಧಿ ಅವರು ನೂತನ ಜಿಲ್ಲಾಧ್ಯಕ್ಷರು ಮತ್ತು ಅವರ ಕುಟುಂಬದವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಂವಾದ ನಡೆಸಿದರು. ಪಕ್ಷದ ಸಂಘಟನೆಯನ್ನು ಬಲಪಡಿಸುವ ಜೊತೆಗೆ ಸಾರ್ವಜನಿಕರ ಹಕ್ಕುಗಳಿಗಾಗಿ ಧ್ವನಿ ಎತ್ತುವಂತೆ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು” ಎಂದು ತಿಳಿಸಿದ್ದಾರೆ.
ಒಂದು ದಿನದ ಪ್ರವಾಸದ ಅಂಗವಾಗಿ ನಾಸಿಕ್ಗೆ ಆಗಮಿಸಿದ್ದ ರಾಹುಲ್ ಗಾಂಧಿ, ತರಬೇತಿ ಶಿಬಿರಕ್ಕೂ ಮುನ್ನ ಗಿರಿಜನ ವಿದ್ಯಾರ್ಥಿಗಳು ಮತ್ತು ರಾಜ್ಯದ ಹಿರಿಯ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮಾತನಾಡಿ, ರಾಜ್ಯದ ಪ್ರಸ್ತುತ ಪ್ರಮುಖ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಮಹಾರಾಷ್ಟ್ರದ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 2.06 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು, ಮುಂಬರುವ ನಾಸಿಕ್ ಕುಂಭಮೇಳದ ಬಜೆಟ್ ಹಂಚಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳು, ಬೆಲೆ ಏರಿಕೆ, ರೈತರ ಆತ್ಮಹತ್ಯೆ ಹಾಗೂ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದ ‘ಶಕ್ತಿಪೀಠ ಹೆದ್ದಾರಿ’ ಯೋಜನೆಗೆ ರೈತರಿಂದ ವ್ಯಕ್ತವಾಗುತ್ತಿರುವ ತೀವ್ರ ವಿರೋಧದ ಕುರಿತು ರಾಹುಲ್ ಅವರ ಗಮನಕ್ಕೆ ತರಲಾಗಿದೆ” ಎಂದು ವಿವರಿಸಿದ್ದಾರೆ.




