ಕೊಲೆ ಪ್ರಯತ್ನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17 ಸಾವಿರ ದಂಡ ವಿಧಿಸಿ ರಾಯಚೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಆರೋಪಿಯಾಗಿರುವ ಭೀಮೇಶ್ ಭೀಮಪ್ಪ ಅವರು 2013ರಲ್ಲಿ ಸಂತ್ರಸ್ತೆಯನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಬಳಿಕ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದಿದ್ದು, 2022ರ ಜನವರಿ 21ರಂದು ರಾತ್ರಿ ಸುಮಾರು 9.30ಕ್ಕೆ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಈ ಕುರಿತು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ರಾಯಚೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸೋಮಶೇಖರ ವಿ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿ: ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಬೇರಗಿ ಅವರು ವಾದ ಮಂಡಿಸಿದರು. ನ್ಯಾಯಾಲಯದ ಕಾರ್ಯದಲ್ಲಿ ರವಿಕುಮಾರ ಪಿ.ಸಿ. ಸಹಕರಿಸಿದರು.





