ಬಿಜೆಪಿಯ ಹಿಂದುತ್ವ, ಕೋಮು ರಾಜಕಾರಣವನ್ನು ಕಟುವಾಗಿ ಟೀಕಿಸುವ ರಾಹುಲ್ ಗಾಂಧಿ ಅವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಲು ಧರ್ಮ ಸಂಸತ್ ತೀರ್ಮಾನ ಮಾಡಿದೆ. ರಾಹುಲ್ ಗಾಂಧಿ ಸನಾತನ ಧರ್ಮಕ್ಕೆ ಅಗೌರವ ತೋರಿದ್ದಾರೆ. ಅವರ ಹೇಳಿಕೆಗಳು ಸನಾತನ ಧರ್ಮದ ನಂಬಿಕೆಗಳು ಹಾಗೂ ಹಿಂಬಾಲಕರಿಗೆ ಅವಮಾನ ಮಾಡಿವೆ ಎಂದು ಹೇಳಿದೆ.
ಇತ್ತೀಚೆಗೆ ಮಾತನಾಡಿದ್ದ ರಾಹುಲ್ ಗಾಂಧಿ, “ಅತ್ಯಾಚಾರಿಗಳು ಹೊರಗೆ ಹೋಗಬೇಕು ಮತ್ತು ಅತ್ಯಾಚಾರಕ್ಕೊಳಗಾದವರು ಮನೆಯಲ್ಲಿಯೇ ಇರಬೇಕು ಎಂದು ಸಂವಿಧಾನದಲ್ಲಿ ಎಲ್ಲಿ ಬರೆಯಲಾಗಿದೆಯೇ? ನಿಮ್ಮ ಪುಸ್ತಕ ಮನುಸ್ಮೃತಿಯಲ್ಲಿ ಇದನ್ನು ಬರೆದಿರಬಹುದು. ಆದರೆ, ಸಂವಿಧಾನದಲ್ಲಿ ಇದನ್ನು ಬರೆಯಲಾಗಿಲ್ಲ” ಎಂದು ಎಂದಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಹಿಸದ ಮನುವಾದಿಗಳ ತಂಡ ಹಿಂದು ಧರ್ಮದಿಂದ ರಾಹುಲ್ ಗಾಂಧಿಯವರನ್ನು ಬಹಿಷ್ಕರಿಸಲು ತೀರ್ಮಾನಿಸಿದೆ.
ಅಷ್ಟಕ್ಕೂ, ಮನುಸ್ಮೃತಿ ಭಾರತದ ಸಂವಿಧಾನವೂ ಅಲ್ಲ, ಹಿಂದುಗಳ ಧಾರ್ಮಿಕ ಮಹಾಗ್ರಂಥವೂ ಅಲ್ಲ. ಅದು ಮಹಿಳಾ ವಿರೋಧಿ, ದಲಿತ ವಿರೋಧ ಧೋರಣೆ ಹೊಂದಿರುವ, ಜಾತಿಗ್ರಸ್ತವಾದ, ಲಿಂಗ ತಾರತಮ್ಯವುಳ್ಳ ಮತ್ತು ಬ್ರಾಹ್ಮಣ್ಯವನ್ನು ಸಮಾಜದ ಮೇಲೆ ಹೇರುವ ಪುಸ್ತಕ. ಮನುಸ್ಮೃತಿ ಪ್ರತಿಪಾದಿಸುವುದನ್ನೇ ಆರ್‌ಸ್ಎಸ್ ಕೂಡ ಪ್ರತಿಪಾದಿಸುತ್ತದೆ. ಹೀಗಾಗಿ, ಆರ್‌ಎಸ್ಎಸ್-ಬಿಜೆಪಿ ಬೆಂಬಲಿತ ಹಿಂದುತ್ವವಾದಿ ಮಠಗಳು, ಸ್ವಾಮೀಜಿಗಳು ರಾಹುಲ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇತ್ತೀಚೆಗೆ, ಪ್ರಯಾಗ್‌ರಾಜ್ ನಗರದಲ್ಲಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಶಿಬಿರದಲ್ಲಿ ಧರ್ಮ ಸಂಸತ್ ನಡೆದಿದ್ದು, ಅಲ್ಲಿ ನೆರೆದಿದ್ದವರು ರಾಹುಲ್ ವಿರುದ್ಧ ಹೌಹಾರಿದ್ದಾರೆ. “ಮನುಸ್ಮೃತಿ ಕುರಿತು ರಾಹುಲ್ ಗಾಂಧಿ ಅವರು ತೀವ್ರ ಟೀಕೆ ಮಾಡಿದ್ದಾರೆ. ಇದರಿಂದ ಸನಾತನ ಧರ್ಮದ ಬೆಂಬಲಿಗರಿಗೆ ನೋವಾಗಿದೆ. ಹಾಗಾಗಿ, ಅವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆ ಸಂಬಂಧ ತಿಂಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ತಪ್ಪಿದಲ್ಲಿ ಬಹಿಷ್ಕಾರದ ನಿರ್ಣಯವು ಜಾರಿಗೆ ಬರಲಿದೆ” ಎಂದಿದ್ದಾರೆ.
ಧರ್ಮ ಸಂಸತ್ ಎಂಬುದು ಧಾರ್ಮಿಕ ಸಂಸತ್ ಆಗಿದ್ದು, ಇಲ್ಲಿ ಹಿಂದು ಸಂತರು ಮತ್ತು ನಾಯಕರು ಸೇರಿ ಸನಾತನ ಧರ್ಮದ ನಂಬಿಕೆಗಳ ವಿಚಾರಕ್ಕೆ ಸಂಬಂಧಿಸಿ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸುತ್ತಾರೆ. ಈ ಧರ್ಮ ಸಂಸತ್ ಬಿಜೆಪಿ ಜೊತೆಗೆ ನಿಂತಿದೆ. ಬಿಜೆಪಿ ಪರವಾಗಿ ಮಾತನಾಡುತ್ತದೆ. ಮೊದಲಿನಿಂದಲೂ ಬಿಜೆಪಿಯ ಹಿಂದುತ್ವ, ಕೋಮು ರಾಜಕಾರಣವನ್ನು ಕಟುವಾಗಿ ಟೀಕಿಸುವ ರಾಹುಲ್ ಗಾಂಧಿ ಅವರ ವಿಚಾರಗಳ ಕುರಿತು ಧರ್ಮ ಸಂಸತ್ ಅಸಹನೆ ತೋರಿದೆ.
ಈ ಹಿಂದೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ಅವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ. ನಕ್ಸಲರ ಮನಃಸ್ಥಿತಿಯವರು ನಿಮ್ಮ ಮಂಗಳಸೂತ್ರವನ್ನು ಬಿಡುವುದಿಲ್ಲ. ಈ ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು ಹೆರುವವರ ಪಾಲಾಗುತ್ತದೆ” ಎಂದು ಕೋಮುದ್ವೇಷಿ ಹೇಳಿಕೆ ನೀಡಿದ್ದರು. ಆದರೆ, ಅವರ ವಿರುದ್ಧ ಈ ಧರ್ಮ ಸಂಸತ್ ಯಾವುದೇ ಹೇಳಿಕೆ ನೀಡಲಿಲ್ಲ.
ಯಾಕೆಂದರೆ, ಈ ಧರ್ಮ ಸಂಸತ್‌ನಲ್ಲಿ ಭಾಗವಹಿಸುವವರೂ ಕೋಮುವಾದಿ ಧೋರಣೆ ಉಳ್ಳವರೇ ಆಗಿದ್ದಾರೆ. ಇತ್ತೀಚೆಗೆ, ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಹಲವು ಮಠಗಳ ಮುಖಂಡರು, ಮುಸ್ಲಿಮರನ್ನು ಹತ್ಯೆಗೈಯ್ಯಲು ಹಾಗೂ ಹಿಂದು ಯುವಕರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಕರೆ ನೀಡಿದ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಳಿಸಿ ಹಾಕಿ, ಆ ಜಾಗದಲ್ಲಿ ಮನುಸ್ಮೃತಿಯನ್ನು ಜಾರಿಗೊಳಿಸಬೇಕು ಎಂಬುದು ಆರ್‌ಎಸ್‌ಎಸ್ -ಬಿಜೆಪಿ ಹುನ್ನಾರ. ಆದರೆ, ಅದು ಅಸಾಧ್ಯ. ಆದರೂ, ಧರ್ಮ ಸಂಸತ್, ಧಾರ್ಮಿಕ ಸಮ್ಮೇಳನ, ಸಮಾವೇಶಗಳನ್ನು ನಡೆಸಿ, ಧಾರ್ಮಿಕ ಮುಖಂಡರು ಮನುಸ್ಮೃತಿಯೇ ತಮ್ಮ ಹಿಂದುರಾಷ್ಟ್ರದ ಸಂವಿಧಾನ ಎಂದೆಲ್ಲ ಬೊಬ್ಬೆ ಹೊಡೆಯುತ್ತಾರೆ.
ಈ ವರದಿ ಓದಿದ್ದೀರಾ?: 2024ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ 74.4% ಹೆಚ್ಚಳ; ಬಿಜೆಪಿಗರೇ ಪ್ರಮುಖ ಆರೋಪಿಗಳು!
ಮನುಸ್ಮೃತಿಯು ಸಮಾನತೆಗೆ ವಿರುದ್ಧವಾದ ಸಿದ್ಧಾಂತಗಳನ್ನು ಹೊಂದಿದ್ದು, ಸಮಾಜದ ಪ್ರಗತಿಗೆ ಅಡಚಣೆಯಾಗಿದೆ. ಮನುಷ್ಯನನ್ನು ಕೀಳಾಗಿ ಕಾಣುವ, ಹೆಣ್ಣುಮಕ್ಕಳಿಗೆ, ಕೆಳವರ್ಗದವರಿಗೆ ಹಕ್ಕುಗಳನ್ನು ನಿರಾಕರಿಸುವ ಮನುಸ್ಮೃತಿಯನ್ನು ಸುಟ್ಟು ಹಾಕಬೇಕು ಎಂದು ಡಾ.ಬಿ ಆರ್ ಅಂಬೇಡ್ಕರ್ ಹೇಳಿದ್ದರು. ಸ್ವತಃ ಅಂಬೇಡ್ಕರ್ ಅವರೇ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು.
ಇತ್ತೀಚೆಗೆ, ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಶಿವ, ಗುರುನಾನಕ್ ಮತ್ತು ಯೇಸುಕ್ರಿಸ್ತನ ಚಿತ್ರವಿದ್ದ ಹಾಗೂ ಕುರಾನ್‌ನ ಉಲ್ಲೇಖವಿದ್ದ ಫಲಕವನ್ನು ಹಿಡಿದು ಮಾತನಾಡಿದ್ದರು. “ನಮ್ಮ ಎಲ್ಲ ಮಹಾಪುರುಷರು ಅಹಿಂಸೆ ಮತ್ತು ಭಯವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ” ಎಂದು ಹರಿಹಾಯ್ದಿದ್ದರು.
ಹಿಂದುತ್ವ, ಕೋಮು ರಾಜಕಾರಣವನ್ನು ಎಳೆಎಳೆಯಾಗಿ ಜನರ ಮುಂದಿಡುತ್ತಿರುವ ರಾಹುಲ್ ಗಾಂಧಿ ವಿಚಾರದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಆತಂಕಗೊಂಡಿವೆ. ಹೀಗಾಗಿ, ರಾಹುಲ್ ವಿರುದ್ಧ ಹಿಂದು ಸಮುದಾಯದಲ್ಲಿ ದ್ವೇಷವನ್ನು ಬಿತ್ತಲು ಬಿಜೆಪಿ ಹವಣಿಸುತ್ತಿದೆ. ಅದರ ಭಾಗವಾಗಿಯೇ ಹಿಂದುತ್ವವಾದಿಗಳ ಧರ್ಮ ಸಂಸತ್, ರಾಹುಲ್ ಅವರಿಗೆ ಬಹಿಷ್ಕಾರ ಹಾಕುವ ಮಾತನಾಡುತ್ತಿದೆ.