ಭಾರತದ ಚುನಾವಣಾ ಆಯೋಗ ರಾಜಿ ಮಾಡಿಕೊಂಡಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬೋಸ್ಟನ್‌ನಲ್ಲಿ ಮಾತನಾಡಿ, ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿದೆ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಯಸ್ಕರ ಸಂಖ್ಯೆಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗವು ಸಂಜೆ 5.30ಕ್ಕೆ ಅಂಕಿ-ಅಂಶಗಳನ್ನು ನೀಡಿದೆ. 5.30 ರಿಂದ 7.30ರ ನಡುವೆ 65 ಲಕ್ಷ ಮತದಾರರ ಮತದಾನದ ಅಂಕಿಅಂಶವನ್ನು ನಮಗೆ ನೀಡಿದೆ. ಇದು ಸಂಭವಿಸುವುದು ಅಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದರು.
ಓರ್ವ ಮತದಾರನಿಗೆ ಮತದಾನ ಮಾಡಲು 3 ನಿಮಿಷ ಬೇಕು, ಈಗೆ ನೋಡಿದರೆ ಮಧ್ಯರಾತ್ರಿ 2 ಗಂಟೆಯವರೆಗೆ ಮತದಾರರ ಸಾಲುಗಳು ಇರಬೇಕಿತ್ತು. ಆದರೆ ಇದು ಸಂಭವಿಸಲಿಲ್ಲ. ನಾವು ವಿಡಿಯೊ ದಾಖಲೆ ಕೇಳಿದಾಗ ಅವರು ನಿರಾಕರಿಸಿರುವುದು ಮಾತ್ರವಲ್ಲದೆ ಅವರು ಕಾನೂನನ್ನು ಬದಲಾಯಿಸಿದರು. ಇದರಿಂದ ಈಗ ನಮಗೆ ವಿಡಿಯೊ ದಾಖಲೆ ಕೇಳಲು ಅವಕಾಶವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ-ಮನುವಾದ ಮರುಕಳಿಸುತ್ತಿದೆಯೇ?
ಚುನಾವಣಾ ಆಯೋಗದ ಕುರಿತು ರಾಹುಲ್ ಗಾಂಧಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಿ ಆರ್ ಕೇಶವನ್, ಮತ್ತೊಂದು ಭಾರತ ಬದ್ನಾಂ ಯಾತ್ರೆ, ವಿದೇಶಿ ನೆಲದಲ್ಲಿ ಭಾರತ ನಿಂದನೆ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಭಾರತದ ಸಾಂವಿಧಾನಿಕ ಸಂಸ್ಥೆಯ ಮೇಲೆ ಮತ್ತೊಮ್ಮೆ ಶೋಚನೀಯವಾಗಿ ದಾಳಿ ನಡೆಸಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆ ಮತ್ತು ಭಾರತದ ಮತದಾರರ ನೋಂದಣಿ ಬಗ್ಗೆ ಶ್ಲಾಘಿಸುತ್ತಿರುವಾಗ ರಾಹುಲ್ ಗಾಂಧಿ ಸುಳ್ಳುಗಳನ್ನು ಹರಡುತ್ತಿದ್ದಾರೆ ಮತ್ತು ಚುನಾವಣಾ ಆಯೋಗದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿ ಆರ್ ಕೇಶವನ್ ಆರೋಪಿಸಿದ್ದಾರೆ.