ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿಯೊಬ್ಬರು ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾರವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ಆತ್ಮಹತ್ಯೆಯಲ್ಲ. ವ್ಯವಸ್ಥೆ ಮಾಡಿದ ಕೊಲೆ” ಎಂದು ಹೇಳಿದ್ದಾರೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಲವು ಪ್ರಮಾದಗಳಿಗೆ ಕಾರಣವಾಗುತ್ತಿದೆ. ಈ ವಿಚಾರದಲ್ಲಿ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಮತ್ತೆ ಪರೀಕ್ಷೆ ಬರೆಯಲಾಗದು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ನೀಟ್ ಆಕಾಂಕ್ಷಿ ಆತ್ಮಹತ್ಯೆ
ಈ ಬಗ್ಗೆ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. “ವೈದ್ಯೆಯಾಗಲು, ತನ್ನ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಆಕಾಂಕ್ಷಾಗೆ ಮಹತ್ವಾಕಾಂಕ್ಷೆ ಇತ್ತು. ಆಕಾಂಕ್ಷಾಳ ತಂದೆ ಒಬ್ಬ ರೈತ. ತನ್ನ ಮಗಳ ವೈದ್ಯೆಯಾಗುವ ಕನಸನ್ನು ನನಸಾಗಿಸಲು, ಅವರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ₹3 ಲಕ್ಷ ಸಾಲವನ್ನು ಪಡೆದಿದ್ದರು. ತಮ್ಮ ಮಗಳು ತರಬೇತಿಗೆ ಹಾಜರಾಗಲು ಸಹಾಯವಾಗಲು ನಾಗ್ಪುರದಲ್ಲಿ ಅಡುಗೆಯವರಾಗಿ ಕೆಲಸವನ್ನೂ ಮಾಡಿದ್ದರು. ಒಬ್ಬ ತಂದೆ ಮಾನವೀಯವಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಿದರು. ನಂತರ, ನೀಟ್ ಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆಯನ್ನು ರದ್ದುಪಡಿಸಲಾಯಿತು. ಆ ಅನಿಶ್ಚಿತತೆಯ ನಡುವೆ, ಆಕಾಂಕ್ಷಾ ನಮ್ಮನ್ನು ಶಾಶ್ವತವಾಗಿ ತೊರೆದರು” ಎಂದು ಬರೆದುಕೊಂಡಿದ್ದಾರೆ.
“ಆಕಾಂಕ್ಷಾಳ ಸಾವು ಆತ್ಮಹತ್ಯೆಯಲ್ಲ. ಇದು ಮೋದಿ ಅಡಿಯಲ್ಲಿ ಭ್ರಷ್ಟ ವ್ಯವಸ್ಥೆಯ ದುರಂತ ಫಲಿತಾಂಶ. ಅದೇ ಹಳೆಯ ಸಮಿತಿಗಳು. ಅದೇ ಹಳೆಯ ವರ್ಗಾವಣೆಗಳು. ಅದೇ ಹಳೆಯ ವಿಚಾರಣೆಗಳು. ಸುಧಾರಣೆ ಇಲ್ಲ, ನ್ಯಾಯವೂ ಇಲ್ಲ. ಮೋದಿ ಅವರೇ ಅಧಿಕಾರ ಶಾಶ್ವತವಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಕಳೆದ 12 ವರ್ಷಗಳಲ್ಲಿ ನೀವು ಶಿಕ್ಷಣ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಹಾಳು ಮಾಡಿದ್ದೀರಿ ಎಂದರೆ, ದೇಶದ ಯುವ ಪೀಳಿಗೆಯ ಇಡೀ ಪೀಳಿಗೆ ಈಗ ತೆರುತ್ತಿರುವ ಬೆಲೆ ಅದು” ಎಂದು ಹೇಳಿದ್ದಾರೆ.
ನೀಟ್ ರದ್ದಾದ ಬಳಿಕ ಐದನೇ ಆತ್ಮಹತ್ಯೆ
ಮೇ 3ರಂದು ನೀಟ್ ಪರೀಕ್ಷೆ ನಡೆದಿದೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಮೇ 12ರಂದು ದೇಶಾದ್ಯಂತ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಜೂನ್ 21ರಂದು ನೀಟ್ ಮರುಪರೀಕ್ಷೆ ನಡೆಯಲಿದೆ. ಆದರೆ ಈಗಾಗಲೇ ವರ್ಷಗಳ ಕಾಲ ಶ್ರಮಪಟ್ಟು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಮೋದಿ ಸರ್ಕಾರದ ಅವ್ಯವಸ್ಥೆಯಿಂದಾಗಿ ಒತ್ತಡಕ್ಕೆ ಒಳಗಾಗಿದ್ದಾರೆ. ಈ ನಡುವೆ ಕೆಲವು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬಂದಿದ್ದಾರೆ. ನೀಟ್ ಪರೀಕ್ಷೆ ರದ್ದಾದ ಬಳಿಕ ಈವರೆಗೆ ಐವರು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





