ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಬೀದರ್ ನಗರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಬುಧವಾರ ನಗರದ ನಯಾ ಕಮಾನ್ ಬಳಿ ಯುವ ಕಾಂಗ್ರೆಸ್ ಬೀದರ್ ವಿಧಾನಸಭಾ ಕ್ಷೇತ್ರ ಘಟಕದ ಕಾರ್ಯಕರ್ತರು ರಹೀಂಖಾನ್ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಗಮನ ಸೆಳೆದರು.
ರಹೀಂ ಖಾನ್ ಅವರ ಭಾವಚಿತ್ರವಿದ್ದ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಕಾರ್ಯಕರ್ತರು, ರಹೀಂ ಖಾನ್ ಅವರಿಗೆ ʼಜಯವಾಗಲಿʼ, ʼಬೇಕೇ ಬೇಕು ನ್ಯಾಯ ಬೇಕುʼ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಬಳಿಕ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.
“ರಹೀಂ ಖಾನ್ ಅವರು ಎರಡು ದಶಕದಿಂದ ಜನ ಸೇವೆಯಲ್ಲಿದ್ದಾರೆ. ನಾಲ್ಕು ಸಲ ಶಾಸಕ ಹಾಗೂ ಎರಡು ಬಾರಿ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತರ ಸಮುದಾಯದ ಕಲ್ಯಾಣ ಕರ್ನಾಟಕ ಭಾಗದ ವರ್ಚಸ್ಸಿನ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನಕ್ಕೆ ಕೊಡಬೇಕು” ಎಂದು ಬೇಡಿಕೆ ಮಂಡಿಸಿದರು.
ಇದನ್ನೂ ಓದಿ : ಬೀದರ್ | ಜಮಾಅತೆ ಇಸ್ಲಾಮಿ ಹಿಂದ್ ಘಟಕದಿಂದ ವಿಶ್ವ ಪರಿಸರ ದಿನ ಆಚರಣೆ, ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಬೀದರ್ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಶೇಕ್ ಅತೀಕ್, ಬ್ಲಾಕ್ ಅಧ್ಯಕ್ಷ ರಹೀಂ, ಪ್ರಮುಖರಾದ ಸೋಹೆಲ್ ಹಕ್, ಸೈಯದ್ ರೆಹಾನ್, ಎಂ.ಡಿ. ಕೈಫ್, ಸೈಯದ್ ಖಿಜರ್, ಎಂ.ಡಿ. ಫಾಜಿಲ್, ಜುನೈದ್ ಅಕ್ರಂ ಮತ್ತಿತರರು ಪಾಲ್ಗೊಂಡಿದ್ದರು.





