ಕಾಂಗ್ರೆಸ್ ತನ್ನ ಸಾಂಸ್ಥಿಕ ರಚನೆಯಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ಉತ್ತೇಜಿಸಬೇಕು ಮತ್ತು ಮುಂದಿನ 10 ವರ್ಷಗಳಲ್ಲಿ ಶೇಕಡ 50 ರಷ್ಟು ಮಹಿಳೆಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಹೊಂದಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕೊಚ್ಚಿಯ ಕೇರಳ ಮಹಿಳಾ ಕಾಂಗ್ರೆಸ್ ಸಮಾವೇಶವಾದ ‘ಉತ್ಸಾಹ್’ ಅನ್ನು ಉದ್ಘಾಟಿಸಿದ ರಾಹುಲ್ ಗಾಂಧಿ, ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಅಗತ್ಯವಾದ ಗುಣಗಳನ್ನು ಹೊಂದಿರುವ ಹಲವಾರು ಮಹಿಳಾ ನಾಯಕರಿದ್ದಾರೆ ಎಂದು ಹೇಳಿದರು.
“ಈ ಹಿಂದೆ, ನಾವು ಸಾಧಿಸಬೇಕಾದ ಉತ್ತಮ ಗುರಿ ಏನೆಂಬುದನ್ನು ನಾನು ಚರ್ಚಿಸುತ್ತಿದ್ದೆ. ಇಂದಿನಿಂದ 10 ವರ್ಷಗಳಲ್ಲಿ ನಮ್ಮ ಪಕ್ಷದ ಮುಖ್ಯಮಂತ್ರಿಗಳಲ್ಲಿ 50 ಪ್ರತಿಶತದಷ್ಟು ಮಹಿಳೆಯರು ಇರಬೇಕೆಂಬುದು ಕಾಂಗ್ರೆಸ್‌ನ ಉತ್ತಮ ಗುರಿಯಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
‘ದೇಶದಲ್ಲಿ ಒಬ್ಬರು ಮಾತ್ರ ಮಹಿಳಾ ಮುಖ್ಯಮಂತ್ರಿಯಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಉತ್ತಮ ಮುಖ್ಯಮಂತ್ರಿಯಾಗುವ ಗುಣ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ ಎಂಬುದು ನನಗೆ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕವಿದೆಯೇ?
ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ , ಇದು ಸಂಪೂರ್ಣವಾಗಿ ಪುರುಷ ಸಂಘಟನೆ. ಮಹಿಳೆಯರನ್ನು ಸೇರಿಸುವುದು ಆರ್‌ಎಸ್‌ಎಸ್ ಸಿದ್ಧಾಂತದ ಭಾಗವಲ್ಲ. ಆರ್‌ಎಸ್‌ಎಸ್ ಸಂಪೂರ್ಣ ಇತಿಹಾಸದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಕ್ಕೆ ಅವಕಾಶ ನೀಡಿಲ್ಲ” ಎಂದು ರಾಹುಲ್ ಹೇಳಿದರು.
“ಮಹಿಳೆಯರು ಅನೇಕ ವಿಷಯಗಳಲ್ಲಿ ಪುರುಷರಿಗಿಂತ ಶ್ರೇಷ್ಠರು ಎಂದು ನಾನು ಭಾವಿಸುತ್ತೇನೆ. ಅವರು ಪುರುಷರಿಗಿಂತ ಹೆಚ್ಚು ತಾಳ್ಮೆ ಹೊಂದಿದ್ದಾರೆ. ಅವರು ಪುರುಷರಿಗಿಂತ ದೀರ್ಘಾವಧಿಯ ಗುರಿಯನ್ನು ಹೊಂದಿದ್ದಾರೆ. ಅವರು ಪುರುಷರಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಸಹಾನುಭೂತಿ ಹೊಂದಿದ್ದಾರೆ. ಮಹಿಳೆಯರು ಅಧಿಕಾರ ರಚನೆಯ ಭಾಗವಾಗಬೇಕು ಎಂದು ನಾವು ಮೂಲಭೂತವಾಗಿ ನಂಬುತ್ತೇವೆ” ಎಂದು ತಿಳಿಸಿದರು
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಗುರಿಯನ್ನು ಹೊಂದಿರುವ ಮಸೂದೆಯು ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಅನುಮೋದನೆಯನ್ನು ಪಡೆದಿತ್ತು. ಒಂದು ದಶಕದ ನಂತರ ಸಂಸತ್ತಿನಲ್ಲಿ ಅಂಗೀಕಾರವಾದ ಯಾವುದೇ ಮಸೂದೆಯನ್ನು ನಾನು ನೋಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.