ಸಂಸತ್ತಿನಲ್ಲಿ ನಡೆಯಲಿರುವ ಲೋಕಸಭಾ ಕ್ಷೇತ್ರ ಮರುವಿಂಗಡಣೆ ಕುರಿತಾದ ಮಹತ್ವದ ಚರ್ಚೆ ಮತ್ತು ಮತದಾನದ ವೇಳೆ ಸಂಸದರು ಕಡ್ಡಾಯವಾಗಿ ಹಾಜರಿರಲೇಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕೇಂದ್ರ ಸರ್ಕಾರವು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯ (2026) ಮೂಲಕ ಲೋಕಸಭೆಯ ಒಟ್ಟು ಸ್ಥಾನಗಳನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. 2026ರ ಜನಗಣತಿಗೂ ಮುನ್ನವೇ ಈ ಮರುವಿಂಗಡಣೆ ಪ್ರಕ್ರಿಯೆ ನಡೆಸಲು ಹಾಗೂ ಅದಕ್ಕೆ ಪೂರಕವಾಗಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಮುಂದಾಗಿದೆ. ಆದರೆ, ಇದು ದಕ್ಷಿಣ ಭಾರತ, ಈಶಾನ್ಯ ಹಾಗೂ ಸಣ್ಣ ರಾಜ್ಯಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಹುನ್ನಾರ ಎಂದು ಆರೋಪಿಸಿರುವ ವಿಪಕ್ಷಗಳು, ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ರಾಹುಲ್ ಗಾಂಧಿ ಅವರು ಈ ನಡೆಯನ್ನು ‘ಅಧಿಕಾರ ಕಬಳಿಸುವ ಯತ್ನ’ ಎಂದು ಕಟುವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಬುಧವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ, ಮಸೂದೆಯನ್ನು ಒಗ್ಗಟ್ಟಿನಿಂದ ಎದುರಿಸುವ ಕುರಿತು ಚರ್ಚಿಸಲಾಯಿತು. ಈ ವೇಳೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಾರ್ಯವಿರುವ ಕಾರಣ ತಮ್ಮ ಪಕ್ಷದ ಕೆಲ ಸಂಸದರು ಕಲಾಪಕ್ಕೆ ಗೈರಾಗುವ ಸಾಧ್ಯತೆಯಿದೆ ಎಂದು ಟಿಎಂಸಿ ನಾಯಕರೊಬ್ಬರು ಸಭೆಯ ಗಮನಕ್ಕೆ ತಂದರು.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಕಲಾಪದಿಂದ ದೂರ ಉಳಿಯುವುದು ಅಥವಾ ಮತದಾನದ ವೇಳೆ ಗೈರಾಗುವುದು ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮೈತ್ರಿಕೂಟದಲ್ಲಿ ಬಿರುಕು ಮೂಡಬಾರದು, ಹೀಗಾಗಿ ಎಷ್ಟೇ ಕಾರ್ಯದೊತ್ತಡವಿದ್ದರೂ ಎಲ್ಲ ಸಂಸದರು ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಮತ್ತು ಮಸೂದೆಯ ವಿರುದ್ಧ ಒಟ್ಟಾಗಿ ಮತ ಚಲಾಯಿಸಬೇಕು ಎಂದು ಸೂಚಿಸಿದ್ದಾರೆ.
ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸಂಸತ್ತಿನಲ್ಲಿ ನೇರ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ವಿಪಕ್ಷಗಳ ಒಗ್ಗಟ್ಟು ಪ್ರದರ್ಶನವು ಈ ಹಂತದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಯಾವುದೇ ಪಕ್ಷದ ಸಂಸದರು ಗೈರಾದರೂ ಅದು ಮೈತ್ರಿಕೂಟದ ಒಟ್ಟಾರೆ ಹೋರಾಟಕ್ಕೆ ಹಿನ್ನಡೆಯುಂಟು ಮಾಡಲಿದೆ ಎನ್ನುವುದು ರಾಹುಲ್ ಗಾಂಧಿ ಅವರ ವಾದವಾಗಿದೆ. ಹೀಗಾಗಿ, ನಿರ್ಣಾಯಕ ಕಲಾಪದಲ್ಲಿ ಟಿಎಂಸಿ ಸಂಸದರ ಉಪಸ್ಥಿತಿ ಹಾಗೂ ವಿಪಕ್ಷಗಳ ಜಂಟಿ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ.




