ಈ ಲೇಖನವನ್ನು ಸೆಪ್ಟೆಂಬರ್ 6, 2023ರಲ್ಲಿ ಅಶೋಕ್ ಮೋದಿಯವರು ಬರೆದದ್ದು. ಆಗ ಜಿಡಿಪಿಯನ್ನು ಕುರಿತು ನಡೆಯುತ್ತಿದ್ದ ಚರ್ಚೆ, ಜಿಡಿಪಿ ಅಳೆಯುವ ಕ್ರಮದಲ್ಲಿ, ಬಳಸುವ ದತ್ತಾಂಶದಲ್ಲಿ ಇದ್ದ ಸಮಸ್ಯೆ ಇವನ್ನೆಲ್ಲಾ ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲವಾಗುವ ಮುಖ್ಯ ಲೇಖನವಿದು.
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಪ್ರಚಾರಕ್ಕಾಗಿ ಹಾಕಿರುವ ದೊಡ್ಡ ದೊಡ್ಡ ಫಲಕಗಳ (Billboards) ಹಿಂದೆ ಕೊಳೆಗೇರಿಗಳಿವೆ. ಅಲ್ಲಿನ ನಿವಾಸಿಗಳಿಗೆ ಈಗ ಜೀವನೋಪಾಯಕ್ಕೆ ದಾರಿಯೇ ಇಲ್ಲದಂತಾಗಿದೆ. ಅವರು ರಸ್ತೆ ಬದಿಯಲ್ಲಿ ಇಟ್ಟುಕೊಂಡಿದ್ದ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸಗೊಳಿಸಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಎಚ್ಚರಿಕೆಯಿಂದ ರೂಪಿಸುತ್ತಿರುವ ಚಿತ್ರಣಕ್ಕೆ ಇವೆಲ್ಲವೂ ಧಕ್ಕೆಯಾಗಬಹುದು ಎನ್ನುವ ಆತಂಕವೇ ಇದಕ್ಕೆ ಕಾರಣ.

ಅಶೋಕ ಮೋದಿ ಅವರು Princeton Universityಯಲ್ಲಿ ಅಂತರಾಷ್ಟ್ರೀಯ ಆರ್ಥಿಕ ನೀತಿಯ ವಿಸಿಟಿಂಗ್ ಪ್ರೊಫೆಸರ್ ಆಗಿದ್ದು, ಮೊದಲು World Bank ಮತ್ತು International Monetary Fund ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು India is Broken: A People Betrayed, Independence to Today (Stanford University Press, 2023) ಎಂಬ ಪುಸ್ತಕದ ಲೇಖಕರಾಗಿದ್ದಾರೆ.
ಈ “ಬ್ರಾಂಡಿಂಗ್ ಮತ್ತು ಸೌಂದರ್ಯೀಕರಣ” ಪ್ರಕ್ರಿಯೆಯ ಭಾಗವಾಗಿ ಭಾರತದ ಜಿಡಿಪಿ (GDP) ಅಂಕಿಅಂಶಗಳನ್ನೂ ಪ್ರದರ್ಶಿಸಲಾಗುತ್ತಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಾರ್ಷಿಕ ಶೇ. 7.8ರಷ್ಟು ಬೆಳವಣಿಗೆ ಸಾಧಿಸಿ. ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಂತೆ ಕಾಣುತ್ತಿದೆ. ಆದರೆ, ಆ ಫಲಕಗಳ ಹಿಂದೆ ಜನ ಬೃಹತ್ ಪ್ರಮಾಣದಲ್ಲಿ ಬದುಕಿಗಾಗಿ ಹೋರಾಡುತ್ತಿದ್ದಾರೆ. ವಾಸ್ತವವೇನೆಂದರೆ, ಬೆಳವಣಿಗೆಯು ತುಂಬಾ ಕಡಿಮೆ ಇದೆ, ಅಸಮಾನತೆ ಹೆಚ್ಚುತ್ತಿದೆ ಮತ್ತು ಉದ್ಯೋಗದ ಕೊರತೆಯು ತೀವ್ರವಾಗಿದೆ.
ಭಾರತದ ಇತ್ತೀಚಿನ ಜಿಡಿಪಿ ಅಂಕಿಅಂಶವನ್ನು ಸಾರುವ ಜಿ20 ಪ್ರೇರಿತ ಫಲಕಗಳಲ್ಲಿ “ವ್ಯತ್ಯಾಸಗಳು” (Discrepancies) ಎಂಬ ನಿಗೂಢ ಸಾಲೊಂದಿದೆ. ಇದು ಸಾಮಾನ್ಯವಾಗಿ ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿ ವರದಿ ಮಾಡುವಾಗ ಬಳಸುವ ಒಂದು ಸಾಮಾನ್ಯ ಪದ್ಧತಿ. ಇಲ್ಲಿ ‘ವ್ಯತ್ಯಾಸ’ ಎಂದರೆ ದೇಶೀಯ ಆದಾಯ (ಸರಕು ಮತ್ತು ಸೇವೆಗಳ ಉತ್ಪಾದನೆಯಿಂದ ಗಳಿಸಿದ್ದು) ಮತ್ತು ವೆಚ್ಚದ (ಅದೇ ಸರಕು ಮತ್ತು ಸೇವೆಗಳನ್ನು ಖರೀದಿಸಲು ನಿವಾಸಿಗಳು ಮತ್ತು ವಿದೇಶಿಯರು ಪಾವತಿಸಿದ್ದು) ನಡುವಿನ ಅಂತರವಿದೆ. ತಾತ್ವಿಕವಾಗಿ, ವೆಚ್ಚವು ಗಳಿಸಿದ ಆದಾಯಕ್ಕೆ ಸಮನಾಗಿರಬೇಕು; ಏಕೆಂದರೆ ಇತರರು ತಮ್ಮ ಉತ್ಪನ್ನವನ್ನು ಖರೀದಿಸಿದಾಗ ಮಾತ್ರ ಉತ್ಪಾದಕರಿಗೆ ಆದಾಯ ಗಳಿಸಲು ಸಾಧ್ಯ. ಆದರೆ ಪ್ರಾಯೋಗಿಕವಾಗಿ ದತ್ತಾಂಶಗಳು ಪರಿಪೂರ್ಣವಾಗಿರುವುದಿಲ್ಲ. ಹಾಗಾಗಿ ಜಗತ್ತಿನಾದ್ಯಂತ ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿ ಆದಾಯ ಮತ್ತು ವೆಚ್ಚದ ಅಂದಾಜುಗಳ ನಡುವೆ ವ್ಯತ್ಯಾಸವಿರುತ್ತದೆ.
ಸಾಮಾನ್ಯವಾಗಿ, ಈ ವ್ಯತ್ಯಾಸವು ಬೆಳವಣಿಗೆಯ ದರಗಳನ್ನು ಲೆಕ್ಕಹಾಕಲು ಅಡ್ಡಿಯಾಗುವುದಿಲ್ಲ. ಏಕೆಂದರೆ ಆದಾಯ ಮತ್ತು ವೆಚ್ಚದ ಅಂಕಿಅಂಶಗಳು ಸ್ವಲ್ಪ ಭಿನ್ನವಾಗಿದ್ದರೂ ಸಹ ಒಂದೇ ರೀತಿಯ ಪ್ರವೃತ್ತಿಯನ್ನು ತೋರುತ್ತವೆ. ಅಂದರೆ ಒಂದೇ ಕ್ರಮದಲ್ಲಿ ಹೆಚ್ಚು ಕಮ್ಮಿಯಾಗುತ್ತಿರುತ್ತವೆ. ಆದರೆ ಒಮ್ಮೊಮ್ಮೆ, ಈ ಎರಡೂ ಸರಣಿಗಳು ಬಹಳ ವಿಭಿನ್ನ ಹಾದಿಗಳಲ್ಲಿ ಸಾಗುವುದುಂಟು. ಇದು ಆರ್ಥಿಕ ಸಾಧನೆಯ ಮೌಲ್ಯಮಾಪನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಭಾರತೀಯ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (NSO) ಇತ್ತೀಚಿನ ವರದಿಯು ಇದಕ್ಕೆ ಒಂದು ಸ್ಪಷ್ಟ ಉದಾಹರಣೆ. ಏಪ್ರಿಲ್-ಜೂನ್ ಅವಧಿಯಲ್ಲಿ ಉತ್ಪಾದನೆಯಿಂದ ಬರುವ ಆದಾಯವು ವಾರ್ಷಿಕ ಶೇ. 7.8ರ ದರದಲ್ಲಿ ಹೆಚ್ಚಾಗಿದೆ. ಆದರೆ ವೆಚ್ಚವು ಕೇವಲ ಶೇ. 1.4ರಷ್ಟು ಮಾತ್ರ ಹೆಚ್ಚಾಗಿದೆ. ಈ ಎರಡೂ ಮಾಪನಗಳಲ್ಲಿ ಖಂಡಿತವಾಗಿಯೂ ಅನೇಕ ದೋಷಗಳಿವೆ. ಆದರೂ, NSO ಆದಾಯದ ಅಂಕಿಅಂಶವನ್ನೇ ಸರಿಯಾದ ಮಾಪಕ ಎಂದು ಪರಿಗಣಿಸುತ್ತದೆ ಮತ್ತು ವೆಚ್ಚವು ಗಳಿಸಿದ ಆದಾಯಕ್ಕೆ ಸಮನಾಗಿರಬೇಕು ಎಂದು ಭಾವಿಸುತ್ತದೆ (ಇದನ್ನೇ ಅದು “ವ್ಯತ್ಯಾಸ” ಎಂಬ ಟಿಪ್ಪಣಿಯಲ್ಲಿ ಸೂಚಿಸಿರುವುದು).
ಸಾಂಖ್ಯಿಕ ವ್ಯತ್ಯಾಸ(Statistical Discrepancy)
ಜಿಡಿಪಿಯನ್ನು ಸಾಮಾನ್ಯವಾಗಿ ಎರಡು ರೀತಿಗಳಲ್ಲಿ ಲೆಕ್ಕಹಾಕಲಾಗುತ್ತದೆ:
ಆದಾಯದ ವಿಧಾನ: ದೇಶದ ಜನರು ಮತ್ತು ಕಂಪನಿಗಳು ಎಷ್ಟು ಗಳಿಸಿದವು? ಎಂಬುದನ್ನು ಗಮನಿಸುತ್ತದೆ ವೆಚ್ಚದ ವಿಧಾನ: ಜನರು ಮತ್ತು ಸರ್ಕಾರ ಎಷ್ಟು ಖರ್ಚು ಮಾಡಿದರು? ಎಂಬುದನ್ನು ಗಮನಿಸುತ್ತದೆ.
ತಾತ್ವಿಕವಾಗಿ ಈ ಎರಡೂ ಮೊತ್ತಗಳು ಸಮನಾಗಿರಬೇಕು (ಆದಾಯ = ವೆಚ್ಚ). ಆದರೆ, ದತ್ತಾಂಶ ಸಂಗ್ರಹಣೆಯಲ್ಲಿನ ದೋಷಗಳಿಂದಾಗಿ ಇವೆರಡರ ನಡುವೆ ಅಂತರ ಉಂಟಾಗುತ್ತದೆ. ಇದನ್ನೇ ‘ಸಾಂಖ್ಯಿಕ ವ್ಯತ್ಯಾಸ’ ಎನ್ನಲಾಗುತ್ತದೆ. ಅಶೋಕ ಮೋದಿ ಅವರ ವಾದವೇನೆಂದರೆ, ಭಾರತದ ಆದಾಯವು ಶೇ. 7.8 ರಷ್ಟು ಬೆಳೆಯುತ್ತಿದ್ದರೆ, ವೆಚ್ಚವು ಕೇವಲ ಶೇ. 1.4 ರಷ್ಟು ಮಾತ್ರ ಬೆಳೆದಿದೆ. ಈ ದೊಡ್ಡ ಅಂತರವು ಅಂಕಿ-ಅಂಶಗಳ ವಿಶ್ವಾಸರ್ಹತೆಯ ಮೇಲೆ ಅನುಮಾನ ಮೂಡಿಸುತ್ತದೆ.
ಇದು ಅಂತರರಾಷ್ಟ್ರೀಯ ಅತ್ಯುತ್ತಮ ಪದ್ಧತಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ‘ವ್ಯತ್ಯಾಸದ ಸಾಲನ್ನು ನೀಡುವ ಉದ್ದೇಶವೇ ಸಾಂಖ್ಯಿಕ ಅಪೂರ್ಣತೆಗಳನ್ನು ಒಪ್ಪಿಕೊಳ್ಳುವುದಕ್ಕೇ ಹೊರತು, ಅವುಗಳನ್ನು ಆದೃಶ್ಯಗೊಳಿಸುವುದಕ್ಕಲ್ಲ. ಅನೇಕ ಭಾರತೀಯರು ಸಂಕಷ್ಟದಲ್ಲಿದ್ದಾಗ ಮತ್ತು ವಿದೇಶಿಯರು ಭಾರತೀಯ ಸರಕುಗಳ ಬಗ್ಗೆ ಅಷ್ಟಾಗಿ ಆಸಕ್ತಿ ತೋರದೆ ಇದ್ದಾಗ ವೆಚ್ಚ ಕಡಿಮೆ ಇರುತ್ತದೆ. ಈ ವಾಸ್ತವವನ್ನು ಮುಚ್ಚಿಡುವ ಪ್ರಯತ್ನವನ್ನು NSO ಮಾಡುತ್ತಿದೆ.
ಸರಿಯಾದ ಕ್ರಮವೆಂದರೆ ಆದಾಯ ಮತ್ತು ವೆಚ್ಚ ಎರಡನ್ನೂ ಅಪರಿಪೂರ್ಣ ಸ್ಕೂಲ (Macro) ಆರ್ಥಿಕ ಮಾಪನಗಳೆಂದು ಗುರುತಿಸುವುದು, ನಂತರ ಎರಡನ್ನೂ ಸಂಯೋಜಿಸಿ ಆರ್ಥಿಕತೆಯ ಸ್ಥಿತಿಯನ್ನು ಅಳೆಯುವುದು. ಆದ್ದರಿಂದಲೇ ಆಸ್ಟ್ರೇಲಿಯಾ, ಜರ್ಮನಿ ಮತ್ತು ಇಂಗ್ಲೆಂಡ್ ಸರ್ಕಾರಗಳು ಆದಾಯ ಮತ್ತು ವೆಚ್ಚಗಳೆರಡೂ ಮಾಹಿತಿಯನ್ನು ಬಳಸಿಕೊಂಡು ತಮ್ಮ ಜಿಡಿಪಿಯನ್ನು ಸರಿಹೊಂದಿಸುತ್ತವೆ.
ಅಮೆರಿಕವು ತನ್ನ ಆರ್ಥಿಕ ಕಾರ್ಯಕ್ಷಮತೆಯನ್ನು ಅಳೆಯಲು ವೆಚ್ಚವನ್ನು (ಆದಾಯವನ್ನೇ ಮಾಪಕವನ್ನಾಗಿ ಬಳಸುವ ಭಾರತದ ಕ್ರಮಕ್ಕೆ ವ್ಯತಿರಿಕ್ತವಾಗಿ) ಪ್ರಾಥಮಿಕ ಮಾಪನವನ್ನಾಗಿ ಬಳಸುತ್ತದೆ. ಆದರೆ ಅಮೆರಿಕದ ಆರ್ಥಿಕ ವಿಶ್ಲೇಷಣಾ ಬ್ಯೂರೋ (BEA) ಆದಾಯ ಮತ್ತು ವೆಚ್ಚದ ನಡುವಿನ ದೊಡ್ಡ ವ್ಯತ್ಯಾಸವನ್ನು ಸರಿದೂಗಿಸಲು ಎರಡರ ಸರಾಸರಿಯನ್ನು ತನ್ನ ಸಂಯೋಜಿತ ಮಾಪಕವಾಗಿ ವರದಿ ಮಾಡುತ್ತದೆ. ನಾವು BEA ವಿಧಾನವನ್ನು ಭಾರತೀಯ ದತ್ತಾಂಶಕ್ಕೆ ಅನ್ವಯಿಸಿದಾಗ, ಇತ್ತೀಚಿನ ಬೆಳವಣಿಗೆಯ ದರವು ಶೇ. 7.8ರಿಂದ ಶೇ. 4.5ಕ್ಕೆ ಇಳಿಯುತ್ತದೆ. ಇದು ಏಪ್ರಿಲ್-ಜೂನ್ 2022ರ ಶೇ. 13.1 ಬೆಳವಣಿಗೆಗೆ ಹೋಲಿಸಿದರೆ ಗಣನೀಯವಾದ ಕುಸಿತವಾಗಿದೆ. ಭಾರತದ ಆರ್ಥಿಕತೆಯ ಬಗ್ಗೆ ಅತಿರಂಜಿತ ಪ್ರಚಾರ ಪ್ರಾರಂಭವಾಗಿದ್ದು ಆಗಲೇ.

ಲಭ್ಯವಿರುವ ದತ್ತಾಂಶವನ್ನು ಸರಳವಾಗಿ ವಿಶ್ಲೇಷಿಸಿದರೂ ಭಾರತದ ಆರ್ಥಿಕತೆಯ ಬಗ್ಗೆ ನಡೆಯುತ್ತಿರುವ ಅತಿರಂಜಿತ ಪ್ರಚಾರಕ್ಕೆ ಆಧಾರವಿಲ್ಲ ಎಂಬುದು ತಿಳಿಯುತ್ತದೆ. ಆದರೆ ಇದು ಭಾರತೀಯ ಮತ್ತು ಅಂತರರಾಷ್ಟ್ರೀಯ ಗಣ್ಯರ ಹಿತಾಸಕ್ತಿಗಳಿಗೆ ಪೂರಕವಾಗಿರುವುದರಿಂದ ಈ ಪ್ರಚಾರ ಮುಂದುವರಿದಿದೆ. 2019ರಲ್ಲೇ ಕುಸಿತ ಪ್ರಾರಂಭವಾಗಿತ್ತು: ಆಗ ಭಾರತದ ಜಿಡಿಪಿ ಬೆಳವಣಿಗೆಯ ದರವು ಶೇ. 3.5ರಷ್ಟಿತ್ತು. ಕೋವಿಡ್ ಸಮಯದಲ್ಲಿ ಅದು ತೀವ್ರವಾಗಿ ಕುಸಿಯಿತು. ನಂತರ 2022-23ರ ಎರಡನೇ ತ್ರೈಮಾಸಿಕದಲ್ಲಿ ಶೇ. 13.1ರಷ್ಟು ತಾತ್ಕಾಲಿಕ ಚೇತರಿಕೆ ಕಾಣಿಸಿಕೊಂಡಿದ್ದರೂ, ಅಂದಿನಿಂದ ಬೆಳವಣಿಗೆಯು ಸರಾಸರಿ ಶೇ. 3.5ರಷ್ಟೇ ಇದೆ ಎಂಬುದನ್ನು ಮರೆಯುತ್ತಾರೆ. ಇತ್ತೀಚಿನ ದತ್ತಾಂಶಗಳನ್ನು ಗಮನಿಸಿದರೆ ಬೆಳವಣಿಗೆ ಮಂದಗತಿಯಲ್ಲಿ ಆಗುತ್ತಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ, ಜಿಡಿಪಿ ಬೆಳವಣಿಗೆ ನಿಧಾನವಾಗುತ್ತಿರುವುದಕ್ಕೆ ಮೂಲ ಕಾರಣಗಳಾದ ಹೆಚ್ಚುತ್ತಿರುವ ಅಸಮಾನತೆಗಳು ಮತ್ತು ಉದ್ಯೋಗದ ಕೊರತೆ ಇತ್ಯಾದಿಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ.
ಆಮದು ಪದಾರ್ಥಗಳ ಮೇಲೆ ನಮ್ಮ ವೆಚ್ಚದ ಪ್ರಮಾಣ ಹೆಚ್ಚುತ್ತಿರುವುದು ಹೆಚ್ಚುತ್ತಿರುವ ಅಸಮಾನತೆಯನ್ನು ಪ್ರತಿಫಲಿಸುತ್ತದೆ. ಕೋವಿಡ್ಗಿಂತ ಮೊದಲು ಒಟ್ಟಾರೆ ವೆಚ್ಚದಲ್ಲಿ ಆಮದು ಪದಾರ್ಥಗಳ ಪಾಲು ಶೇ. 22ರಷ್ಟಿತ್ತು, ಈಗ ಅದು ಶೇ. 26ಕ್ಕೆ ಏರಿದೆ. ಹೆಚ್ಚಿನ ವಿನಿಮಯ ದರದಿಂದಾಗಿ ಶ್ರೀಮಂತ ಭಾರತೀಯರು ವೇಗದ ಕಾರುಗಳು. ಚಿನ್ನದ ಕೈಗಡಿಯಾರಗಳು ಮತ್ತು ಡಿಸೈನರ್ ಹ್ಯಾಂಡ್ಬ್ಯಾಗ್ಗಳನ್ನು ಖರೀದಿಸುತ್ತಿದ್ದಾರೆ – ಹೆಚ್ಚಾಗಿ ಜ್ಯೂರಿಕ್, ಮಿಲನ್ ಮತ್ತು ಸಿಂಗಪುರಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಆದರೆ ಬಹುಸಂಖ್ಯಾತ ಜನ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ ಪಾಡುಪಡುತ್ತಿದ್ದಾರೆ.
ಭಾರತದ ಆರ್ಥಿಕತೆಯು ಉದ್ಯೋಗಗಳನ್ನು ಸೃಷ್ಟಿಸಲು, ಅದರಲ್ಲೂ ವಿಶೇಷವಾಗಿ ಗೌರವಾನ್ವಿತ ಬದುಕನ್ನು ನಡೆಸಲು ಬೇಕಾದ ಉದ್ಯೋಗವನ್ನು ಸೃಷ್ಟಿಸಲು ಏಕೆ ವಿಫಲವಾಗುತ್ತಿದೆ ಎಂಬುದನ್ನು ಈ ದತ್ತಾಂಶಗಳು ತೋರಿಸುತ್ತವೆ. ಕಳೆದ ತ್ರೈಮಾಸಿಕದಲ್ಲಿ, ಸಾರ್ವಜನಿಕ ಆಡಳಿತವನ್ನು ಹೊರತುಪಡಿಸಿದರೆ ಶೇ. 12.1ರಷ್ಟು ವೇಗದ ಆದಾಯದ ಬೆಳವಣಿಗೆ ಕಂಡ ಕ್ಷೇತ್ರಗಳೆಂದರೆ ಹಣಕಾಸು ಮತ್ತು ರಿಯಲ್ ಎಸ್ಟೇಟ್. ಉದಾರೀಕರಣದ ನಂತರದ ಭಾರತೀಯ ಅಭಿವೃದ್ಧಿಯ ಈ ಲಕ್ಷಣವು ಈಗ “ಫಿನ್ಟೆಕ್”ಗಳಿಂದಾಗಿ ಮತ್ತಷ್ಟು ಹೆಚ್ಚಾಗಿದೆ. ಇದು ಉನ್ನತ ವಿದ್ಯಾವಂತ ಭಾರತೀಯರಿಗೆ ಕೇವಲ ಬೆರಳೆಣಿಕೆಯಷ್ಟು ಉದ್ಯೋಗಗಳನ್ನು ಮಾತ್ರ ಸೃಷ್ಟಿಸುತ್ತದೆ. ಸಾರ್ವಜನಿಕ ಆಡಳಿತವೂ ಬೆಳೆಯುತ್ತಿದೆ. ಆದರೆ ಅಲ್ಲಿ ಕೂಡ ಉದ್ಯೋಗಾವಕಾಶಗಳು ಸೀಮಿತವಾಗಿವೆ. ಇತರ ಬೆಳವಣಿಗೆಯ ಕ್ಷೇತ್ರಗಳಲ್ಲಿ, ನಿರ್ಮಾಣ ಮತ್ತು ಕೆಳಹಂತದ ಸೇವೆಗಳು (ವ್ಯಾಪಾರ, ಸಾರಿಗೆ ಮತ್ತು ಹೋಟೆಲ್) ಸೃಷ್ಟಿಸುತ್ತಿರುವ ಕೆಲಸಗಳು ಆರ್ಥಿಕವಾಗಿ ಅನಿಶ್ಚಿತವಾಗಿವೆ. ಈ ಕೆಲಸಗಳು ಕಾರ್ಮಿಕರನ್ನು ಯಾವುದೇ ಕ್ಷಣದಲ್ಲಿ ತೀವ್ರ ಸಂಕಷ್ಟಕ್ಕೆ ತಳ್ಳಿಬಿಡಬಹುದು.
ಯಾವುದೇ ಯಶಸ್ವಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ ತಯಾರಿಕಾ (Manufacturing) ಕ್ಷೇತ್ರವು ಉದ್ಯೋಗದ ಪ್ರಾಥಮಿಕ ಮೂಲವಾಗಿರುತ್ತದೆ. ಆದರೆ ಭಾರತದಲ್ಲಿ ತಯಾರಿಕಾ ಕ್ಷೇತ್ರವು ಬೆಳೆಯುತ್ತಲೇ ಇಲ್ಲ. ಹಲವು ದಶಕಗಳಿಂದ ಮಂದಗತಿಯಲ್ಲಿರುವ ಈ ಕ್ಷೇತ್ರ, ಕೋವಿಡ್ ನಂತರ ಇನ್ನೂ ದುರ್ಬಲವಾಗಿದೆ. ಇದರಿಂದಾಗಿಯೇ ಭಾರತಕ್ಕೆ ಶ್ರಮ-ಆಧಾರಿತ (Labour-intensive) ಉತ್ಪನ್ನಗಳ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ಸಾಧ್ಯವಾಗುತ್ತಿಲ್ಲ. ಕುಸಿಯುತ್ತಿರುವ ಜಾಗತಿಕ ವ್ಯಾಪಾರ ಮತ್ತು ಆದಾಯದ ಅಸಮಾನತೆಯಿಂದಾಗಿ ತಯಾರಿಕಾ ಉತ್ಪನ್ನಗಳಿಗೆ ದೇಶೀಯ ಬೇಡಿಕೆ ಕಡಿಮೆಯಾಗಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಭಾರತೀಯ ಅಧಿಕಾರಿಗಳಿಗೆ ಜಿ20 ಶೃಂಗಸಭೆಯ ಮುಂದೆ ಆಕರ್ಷಕ ಚಿತ್ರಣ ಮತ್ತು ಅಂಕಿಅಂಶಗಳನ್ನು ಪ್ರದರ್ಶಿಸಬೇಕಾಗಿದೆ; ಹಾಗಾಗಿ ಅವರು ತಮಗೆ ಅನನುಕೂಲವಾಗಿರುವ ವಾಸ್ತವವನ್ನು ತಳ್ಳಿಹಾಕುತ್ತಿದ್ದಾರೆ. ಆದರೆ ಅವರು ಅಪಾಯಕಾರಿ ಆಟವನ್ನಾಡುತ್ತಿದ್ದಾರೆ. ವಾಸ್ತವವೆಂದರೆ ಇಂದು ಬೆಳವಣಿಗೆ ನಿಧಾನವಾಗುತ್ತಿದೆ. ಅಸಮಾನತೆ ಹೆಚ್ಚುತ್ತಿದೆ ಮತ್ತು ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ತಪ್ಪುದಾರಿಗೆಳೆಯುವ ಸಾಂಖ್ಯಿಕ ಅಂಕಿಅಂಶಗಳನ್ನು ತೋರಿಸುತ್ತಾ ವಾಸ್ತವಕ್ಕೆ ಕಣ್ಣು ಮುಚ್ಚಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅಧಿಕಾರಿಗಳು ತಾವು ಭಾರತವನ್ನು ನಡೆಸುತ್ತಿರುವ ಹಾದಿಯನ್ನು ಗುರುತಿಸಿ. ಅದನ್ನು ಮರುಪರಿಶೀಲಿಸುವುದು ಒಳಿತು.
ಸೆಪ್ಟೆಂಬರ್ 6, 2023
ಮೂಲ: ಪ್ರಾಜೆಕ್ಟ್ ಸಿಂಡಿಕೇಟ್

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




