ಪಶ್ಚಿಮ ಬಂಗಾಳದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಇಂದು ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಂಗಾಳದ ರಾಜ್ಯ ಘಟಕದ ಅಧ್ಯಕ್ಷರಾದ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದರು.
ಬಿಹಾರದಿಂದ ಪಶ್ಚಿಮ ಬಂಗಾಳದ ಹರಿಶ್ಚಂದ್ರ ಪುರ್ ಪ್ರದೇಶಕ್ಕೆ ಯಾತ್ರೆ ಪ್ರವೇಶಿಸಿದಾಗ ಬಹುಶಃ ಗುಂಪಿನಲ್ಲಿ ಹಿಂದಿನಿಂದ ಯಾರೋ ಒಬ್ಬರು ಕಲ್ಲು ತೂರಿದ್ದಾರೆ. ಪೊಲೀಸ್ ಪಡೆ ಇದನ್ನು ನಿರ್ಲಕ್ಷ್ಯ ವಹಿಸಿದೆ. ಇದು ಸಣ್ಣ ಘಟನೆಯಾದರೂ ಏನಾದರೂ ಆಗಬಹುದಿತ್ತು” ಎಂದು ಅಧೀರ್ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?
ಇದಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ಇದು ತಪ್ಪಾದ ಸುದ್ದಿ. ಒಂದು ದೊಡ್ಡ ಗುಂಪು ರಾಹುಲ್ ಅವರನ್ನು ಭೇಟಿ ಮಾಡಲು ಬಂದಾಗ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರಾಹುಲ್ ಅವರ ಕಾರಿನ ಬಳಿ ಬಂದಿದ್ದಾರೆ. ತಕ್ಷಣ ಕಾರ್ ಬ್ರೇಕ್ ಹಾಕಿದಾಗ ಭದ್ರತಾ ವೃತ್ತದಲ್ಲಿದ್ದ ಹಗ್ಗ ತಗುಲಿ ಗಾಜು ಒಡೆದಿದೆ. ಜನ ನಾಯಕ ರಾಹುಲ್ ಗಾಂಧಿ ಅವರು ಜನರಿಗೆ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಜನರು ಅವರ ಜೊತೆಗಿದ್ದಾರೆ. ಜನರು ಅವರನ್ನು ರಕ್ಷಿಸುತ್ತಾರೆ” ಎಂದು ಎಕ್ಸ್‌ನಲ್ಲಿ ತಿಳಿಸಲಾಗಿದೆ.
ಬಂಗಾಳದಲ್ಲಿ ಲೋಕಸಭಾ ಚುನಾವಣೆಗಾಗಿ ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಯಲ್ಲಿ ಉಂಟಾದ ಅಸಮಾಧಾನದಿಂದ ದಾಳಿಯ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ತಿಳಿಸಿವೆ.