ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ನಡೆಯುತ್ತಿರುವ ತಮ್ಮ ‘ನೋ ಐಡಿಯಾ ಈಸ್ ಫೈನಲ್’ (No Idea Is Final) ಛಾಯಾಚಿತ್ರ ಪ್ರದರ್ಶನದಿಂದ ಪ್ರತಿಭಟನೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂಬ ರೆಹಾನ್ ವಾಡ್ರಾ(ಪ್ರಿಯಾಂಕಾ ಗಾಂಧಿ ಅವರ ಪುತ್ರ) ಆರೋಪದ ಬೆನ್ನಲ್ಲೇ, ಆ ಇಡೀ ಪ್ರದರ್ಶನವನ್ನು ಕೇರಳದಲ್ಲಿ ಆಯೋಜಿಸುವಂತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಆಹ್ವಾನ ನೀಡಿದ್ದಾರೆ.
ಈ ಕುರಿತು ‘ಎಕ್ಸ್’ (X) ಜಾಲತಾಣದಲ್ಲಿ ರೆಹಾನ್ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿರುವ ಮುಖ್ಯಮಂತ್ರಿ ಸತೀಶನ್, ” ರೆಹಾನ್ಅ ವರ ‘ನೋ ಐಡಿಯಾ ಈಸ್ ಫೈನಲ್’ ಛಾಯಾಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ, ಯಾವುದೇ ಚಿತ್ರಗಳನ್ನು ಕೈಬಿಡದೆ ನಮ್ಮ ರಾಜ್ಯದಲ್ಲಿ ಆಯೋಜಿಸಲು ಕೇರಳ ಹೆಮ್ಮೆಪಡುತ್ತದೆ ಮತ್ತು ಸಂತೋಷಪಡುತ್ತದೆ,” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ನಡೆಯುತ್ತಿದ್ದ ತಮ್ಮ ಏಕವ್ಯಕ್ತಿ ಪ್ರದರ್ಶನದಿಂದ ಪ್ರತಿಭಟನೆಗಳನ್ನು ಸೆರೆಹಿಡಿದಿದ್ದ ಹಲವು ಚಿತ್ರಗಳನ್ನು ಅಧಿಕಾರಿಗಳು ಬಲವಂತವಾಗಿ ತೆರವುಗೊಳಿಸಿದ್ದಾರೆ ಎಂದು ರೆಹಾನ್ ಆರೋಪಿಸಿದ್ದರು. ಅಲ್ಲದೆ, ಬುಧವಾರ ಸಂಜೆ 5 ಗಂಟೆಯೊಳಗೆ ಆ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆಯದಿದ್ದರೆ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಆಡಳಿತ ಮಂಡಳಿ ಬೆದರಿಕೆ ಹಾಕಿತ್ತು. ಪ್ರದರ್ಶನದ ವಿನ್ಯಾಸವನ್ನು ಮೊದಲೇ ನೀಡಿದ್ದರೂ ಈ ಕ್ರಮ ಕೈಗೊಳ್ಳಲಾಗಿದೆ ಹಾಗೂ ಆ ಚಿತ್ರಗಳಲ್ಲಿ ಯಾವುದೇ ರಾಜಕೀಯ ಸಂದೇಶವಿರಲಿಲ್ಲ, ಕೇವಲ ಕಳೆದ ಆರು ತಿಂಗಳ ಪ್ರತಿಭಟನೆಗಳ ದಾಖಲೆಯಷ್ಟೇ ಆಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದರು.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಕಲಾತ್ಮಕ ಅಭಿವ್ಯಕ್ತಿಗೆ ಹೆದರುವ ಅಧಿಕಾರಸ್ಥರು ತಾವು ಉಳಿಸಿಕೊಳ್ಳಲು ಬಯಸುವ ಅಧಿಕಾರವನ್ನೇ ಕಳೆದುಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಛಾಯಾಚಿತ್ರಗಳ ತೆರವು ಕಾರ್ಯಾಚರಣೆಯನ್ನು ‘ಹಾಸ್ಯಾಸ್ಪದ’ ಎಂದು ಕರೆದಿರುವ ಅವರು, ಅಧಿಕಾರಿಗಳು ದೇಶದ ಯುವಜನರ ಧ್ವನಿಯನ್ನು ಅತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಲು ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ನಿರಾಕರಿಸಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ತಮಗೆ ಅಧಿಕಾರವಿಲ್ಲ ಎಂದು ಬಿಕಾನೇರ್ ಹೌಸ್‌ನ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ, ಈ ಆರೋಪಗಳನ್ನು ‘ನಕಲಿ ಸುದ್ದಿ’ (Fake news) ಎಂದು ತಳ್ಳಿಹಾಕಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಬಿಕಾನೇರ್ ಹೌಸ್ ನೀತಿಯ ಪ್ರಕಾರ ಅಲ್ಲಿ ಯಾವುದೇ ರಾಜಕೀಯ ಪ್ರೇರಿತ ವಿಚಾರಗಳನ್ನು ಪ್ರದರ್ಶಿಸಲು ಅವಕಾಶವಿಲ್ಲ ಎಂದಿದ್ದಾರೆ. ಅಲ್ಲದೆ, ತಮ್ಮ ಪುತ್ರನನ್ನು ರಾಜಕೀಯಕ್ಕೆ ತರಲು (ಲಾಂಚ್ ಮಾಡಲು) ಪ್ರಿಯಾಂಕಾ ಗಾಂಧಿ ಬೇರೊಂದು ಮಾರ್ಗವನ್ನು ಹುಡುಕಿಕೊಳ್ಳುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.





