ಟೆಹ್ರಾನ್ ರಾಜತಾಂತ್ರಿಕ ಒಪ್ಪಂದಕ್ಕೆ ಬರಲು ವಿಫಲವಾದರೆ ಇರಾನ್ ಮೇಲೆ ಮತ್ತೊಂದು ಸೇನಾ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ಅನ್ನು ಒಪ್ಪಂದಕ್ಕೆ ಬರುವಂತೆ ಮಾಡಲು ವಾಷಿಂಗ್ಟನ್ “ಮತ್ತೊಂದು ಸಣ್ಣ ಎಪಿಕ್ ಫ್ಯೂರಿ” (Epic Fury) ಕಾರ್ಯಾಚರಣೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಆಕ್ರಮಣಕಾರಿ ವಿದೇಶಾಂಗ ನೀತಿಯ ನಿಲುವನ್ನು ವ್ಯಕ್ತಪಡಿಸಿದರು. ತಮ್ಮ ಹಿಂದಿನ ರಾಷ್ಟ್ರೀಯ ಭದ್ರತಾ ನಿರ್ಧಾರಗಳನ್ನು ಎತ್ತಿ ತೋರಿಸಿದ ಅವರು, ಇರಾನ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಮಾತುಕತೆಗಳು ವಿಫಲವಾದರೆ ಸೇನಾ ಕಾರ್ಯಾಚರಣೆ ನಡೆಸುವ ಸುಳಿವು ನೀಡಿದರು.
”ನಾವು ಮತ್ತೊಂದು ಸಣ್ಣ ‘ಎಪಿಕ್ ಫ್ಯೂರಿ’ ಮಾಡಬಹುದು, ಅಥವಾ ಅವರು ಒಪ್ಪಿಕೊಳ್ಳುತ್ತಾರೆ,” ಎಂದು ಟ್ರಂಪ್ ನೆರೆದಿದ್ದ ಜನಸ್ತೋಮಕ್ಕೆ ತಿಳಿಸಿದರು. ಇರಾನ್‌ನ ಕಾರ್ಯತಂತ್ರವನ್ನು ಪ್ರಶ್ನಿಸಿದ ಅವರು, “ಅವರು ಬುದ್ಧಿವಂತರಾಗಿದ್ದರೆ, ‘ಬನ್ನಿ ವ್ಯವಹಾರದ ಬಗ್ಗೆ ಮಾತನಾಡೋಣ’ ಎಂದು ಹೇಳುತ್ತಾರೆ. ಆದರೆ, ಅವರು ಹಾಗೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅನುಮಾನವಿದೆ, ಏಕೆಂದರೆ ಬಹುಶಃ ಅವರು ಬುದ್ಧಿವಂತರಲ್ಲ,” ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕ್ಯೂಬಾ ಬಗ್ಗೆಯೂ ಮಾತನಾಡಿದ ಟ್ರಂಪ್, ಮಧ್ಯಪ್ರಾಚ್ಯದಿಂದ ಹಿಂದಿರುಗುವ ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳು ಕ್ಯೂಬಾವನ್ನು ಎದುರಿಸಲಿವೆ ಎಂದು ತಮಾಷೆ ಮಾಡಿದರು. “ಆ ಸುಂದರ ಹಡಗುಗಳು ಕ್ಯೂಬಾ ಮಾರ್ಗವಾಗಿ ಹಾದುಹೋಗಲಿವೆ. ಅವುಗಳಲ್ಲಿ ಒಂದನ್ನು ಕರಾವಳಿಯಿಂದ 50 ಗಜಗಳಷ್ಟು ದೂರದಲ್ಲಿ ನಿಲ್ಲಿಸುತ್ತೇವೆ. ಆಗ ಅವರು ಕೈಗಳನ್ನೆತ್ತಿ ಶರಣಾಗುತ್ತಾರೆ, ಆ ಕೆಲಸವನ್ನು ಪೂರ್ಣಗೊಳಿಸಲು ನಾವು (ಫ್ಲೋರಿಡಾ ಸೆನೆಟರ್) ಮಾರ್ಕೊ ರುಬಿಯೊ ಅವರನ್ನು ಕಳುಹಿಸುತ್ತೇವೆ,” ಎಂದರು.
ವಿದೇಶಗಳಲ್ಲಿ ಬಂಧಿತರಾಗಿರುವ ಅಮೆರಿಕನ್ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವಲ್ಲಿ ತಮ್ಮ ಸರ್ಕಾರದ ಯಶಸ್ಸನ್ನು ಟ್ರಂಪ್ ಶ್ಲಾಘಿಸಿದರು. “ನಾವು ಹಮಾಸ್ ವಶದಲ್ಲಿದ್ದ 28 ಒತ್ತೆಯಾಳುಗಳನ್ನು, ಬದುಕುಳಿದವರು ಮತ್ತು ಮೃತರು ಸೇರಿದಂತೆ, ಅವರ ಕುಟುಂಬಗಳಿಗೆ ಹಿಂದಿರುಗಿಸಿದ್ದೇವೆ. ನಿನ್ನೆಯಷ್ಟೇ ಸ್ಟೀಫನ್ ಹಬ್ಬಾರ್ಡ್ ಅವರನ್ನು ರಷ್ಯಾದಿಂದ ವಾಪಸ್ ಕರೆತಂದಿದ್ದೇವೆ,” ಎಂದು ಅವರು ವಿವರಿಸಿದರು.
ದೇಶೀಯ ಆರೋಗ್ಯ ರಕ್ಷಣೆ ಮತ್ತು ವೃದ್ಧರ ಆರೈಕೆಯತ್ತ ಗಮನಹರಿಸಿದ ಟ್ರಂಪ್, ದೇಶಾದ್ಯಂತ ಆರೈಕೆ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮಹತ್ವದ ಫೆಡರಲ್ ಅನುದಾನವನ್ನು ಘೋಷಿಸಿದರು. “ಅಮೆರಿಕಾದ್ಯಂತ ಮತ್ತು ಫ್ಲೋರಿಡಾದ ವೃದ್ಧಾಶ್ರಮಗಳಲ್ಲಿ ಕನಿಷ್ಠ 5,000 ಹೊಸ ದಾದಿಯರನ್ನು ನೇಮಿಸಿಕೊಳ್ಳಲು ಟ್ರಂಪ್ ಆಡಳಿತವು $250 ಮಿಲಿಯನ್ ಹೂಡಿಕೆ ಮಾಡುತ್ತಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ,” ಎಂದರು.





