ಛತ್ತೀಸ್‌ಗಢದ ರಾಯ್‌ಗರ್ ಮತ್ತು ದೆಹಲಿ ನಡುವೆ ಸಂಚರಿಸುತ್ತಿದ್ದ ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕನನ್ನು ರೈಲ್ವೇ ಪೊಲೀಸರು (ಜಿಆರ್‌ಪಿ) ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತ ಕಾರ್ಮಿಕನನ್ನು ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಪಲೇರಾ ಪ್ರದೇಶದ ನಿವಾಸಿ ರಾಮದಯಾಳ್ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಅವರು ತನ್ನ ಮಗನೊಂದಿಗೆ ದೆಹಲಿಗೆ ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಆಗ್ರಾ ಮತ್ತು ಮಥುರಾ ನಡುವೆ ಆತನ ಮೇಲೆ ರೈಲ್ವೇ ಪೊಲೀಸರು ಹಲ್ಲೆ ನಡೆಸಿದ್ದು, ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ಕಾರ್ಮಿಕನ ಮಗ ವಿಶಾಲ್ ಅಹಿರ್ವಾರ್ ಹೇಳುವಂತೆ; ಟಿಕಮ್‌ಗಢದಿಂದ ಲಲಿತ್‌ಪುರಕ್ಕೆ ಗೀತಾ ಜಯಂತಿ ಎಕ್ಸ್‌ಪ್ರೆಸ್‌ನಲ್ಲಿ ತಂದೆ-ಮಗ ಬಂದಿದ್ದಾರೆ. ಬಳಿಕ, ಅಲ್ಲಿ, ದೆಹಲಿಗೆ ತೆರಳಲು ಗೊಂಡ್ವಾನ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯನ್ನು ಹತ್ತಿದ್ದಾರೆ. ರೈಲು ಆಗ್ರಾ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ಬಳಿಕ ಕಾರ್ಮಿಕ ರಾಮದಯಾಳ್ ಧೂಮಪಾನ ಮಾಡಲು ಬೀಡಿ ಹಚ್ಚಿದ್ದಾರೆ. ಆಗ, ಅಲ್ಲಿಗೆ ಬಂದ ಜಿಆರ್‌ಪಿ ಕಾನ್‌ಸ್ಟೇಬಲ್‌ಗಳು ಕಾರ್ಮಿಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
“ಹಲ್ಲೆ ಮಾಡುವುದನ್ನು ನಿಲ್ಲಿಸಲು ಎಷ್ಟೇ ಮನವಿ ಮಾಡಿದರೂ ಕಿವಿಗೊಡದ ಕಾನ್‌ಸ್ಟೇಬಲ್‌ಗಳು ಥಳಿಸುವುದನ್ನು ಮುಂದುವರೆಸಿದರು. ಜನರಲ್ ಬೋಗಿಯಿಂದ ಸ್ಲೀಪರ್‌ಗೆ ಬೋಗಿಗೆ ಎಳೆದೊಯ್ದು ಅಲ್ಲಿಯೂ ಹೊಡೆದರು. ರಾಮದಯಾಳ್ ಅವರ ಆರೋಗ್ಯ ಹದಗೆಟ್ಟಾಗ, ಕಾನ್‌ಸ್ಟೇಬಲ್‌ಗಳು ಮಥುರಾದ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ರಾಮದಯಾಳ್ ಅವರ ಮೃತದೇಹದೊಂದಿಗೆ ಮಥುರಾದಲ್ಲಿ ಕಾನ್‌ಸ್ಟೇಬಲ್‌ಗಳು ಇಳಿದುಕೊಂಡರು. ಸ್ಥಳಕ್ಕೆ ಬಂದ ವೈದ್ಯರು, ತಮ್ಮ ತಂದೆ ಮೃತಪಟ್ಟಿರುವುದಾಗಿ ಘೋಷಿಸಿದರು” ಎಂದು ಮೃತ ಕಾರ್ಮಿಕನ ಮಗ ವಿಶಾಲ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ
ಮಥುರಾದ ರೈಲ್ವೆ ಪೊಲೀಸರು (GRP) ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ಪಂಚನಾಮೆ ನಡೆಸಿದ್ದಾರೆ. ಬಳಿಕ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.