ದಲಿತ ಯುವಕನ ಮೇಲೆ ಪ್ರಬಲ ಜಾತಿ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿ, ಆತನ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿರುವ ಜಾತಿ ದೌರ್ಜನ್ಯದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಸಿಕಾರ್ ಜಿಲ್ಲೆಯ ಫತೇಪುರ್ ಪ್ರದೇಶದಲ್ಲಿ ಏಪ್ರಿಲ್ 8ರಂದು ಘಟನೆ ನಡೆದಿದೆ. ಸಂತ್ರಸ್ತ ಯುವಕ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
“ಏಪ್ರಿಲದ 8ರಂದು ಗ್ರಾಮದಲ್ಲಿ ಮದುವೆ ಮೆರವಣಿಗೆ ವೀಕ್ಷಿಸಲು ಹೋಗಿದ್ದೆ. ಆಗ ಇಬ್ಬರು ಆರೋಪಿಗಳು ಕೆಲಸದ ನೆಪವೊಡ್ಡಿ ನನ್ನನ್ನು ಕರೆದೊಯ್ದರು. ನಿರ್ಜನ ಪ್ರದೇಶದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದರು. ಅಸ್ವಭಾವಿಕ ಲೈಂಗಿಕ ಕ್ರಿಯೆಗೂ ಯತ್ನಿದರು. ಜಾತಿ ನಿಂದನೆ ಮಾಡಿ, ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದರು” ಎಂದು ಸಂತ್ರಸ್ತ ಆರೋಪಿಸಿದ್ದಾರೆ.
“ಆರೋಪಿಗಳು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಯುವಕ ತಿಳಿಸಿದ್ದಾರೆ.
“ಸಂತ್ರಸ್ತ ಯುವಕನ ದೂರು ದಾಖಲಿಸಿದ ಬಳಿಕ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದೇವೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿಎಸ್‌ಪಿ) ಅರವಿಂದ್ ಕುಮಾರ್ ಹೇಳಿದ್ದಾರೆ.