ಹಣ ಕದ್ದಿದ್ದಾರೆಂಬ ಆರೋಪದ ಮೇಲೆ ಇಬ್ಬರು ಕಾರ್ಮಿಕರ ಮೇಲೆ ಕಾರ್ಖಾನೆ ಮಾಲೀಕ ವಿಕೃತವಾಗಿ ದೌರ್ಜನ್ಯ ನಡೆಸಿರುವ ಅಮಾನವೀಯ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಕೊರ್ಬಾ ಜಿಲ್ಲೆಯ ಖಾಪ್ರಭಟ್ಟಿ ಪ್ರದೇಶದ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ಅಭಿಷೇಕ್ ಭಾಂಬಿ ಮತ್ತು ವಿನೋದ್ ಭಾಂಬಿ ಎಂಬರ ಮೇಲೆ ಮಾಲೀಕ ಚೋಟು ಗುರ್ಜರ್ ಎಂಬಾತ ದೌರ್ಜನ್ಯ ಎಸಗಿದ್ದಾನೆ. ಕಾರ್ಮಿಕರ ಉಗುರು ಕಿತ್ತು, ಅರೆಬೆತ್ತಲೆಗೊಳಿಸಿ, ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟಿದ್ದಾನೆ.
ಇತ್ತೀಚೆಗೆ, ಅಭಿಷೇಕ್ ತನ್ನ ವಾಹನ ನಿರ್ವಹಣೆಗಾಗಿ ಮಾಲೀಕನ ಬಳಿ 20,000 ರೂ. ಮುಂಗಣ ಹಣ ಕೇಳಿದ್ದರು. ಆದರೆ, ಹಣ ಕೊಡಲು ಮಾಲೀಕ ನಿರಾಕರಿಸಿದ್ದರು. ಹೀಗಾಗಿ, ಕೆಲಸ ಬಿಡುವುದಾಗಿ ಅಭಿಷೇಕ್ ಹೇಳಿದ್ದರು. ಇದರಿಂದ ವಿಚಲಿತಗೊಂಡಿದ್ದ. ಮಾಲೀಕ, ಕೆಲ ದಿನಗಳ ಬಳಿಕ ಅಭಿಷೇಕ್ ಮತ್ತು ವಿನೋದ್ ಮೇಲೆ ಕಳ್ಳತನದ ಆರೋಪ ಹೊರಿಸಿ, ದೌರ್ಜನ್ಯ ಎಸಗಿ ವಿಕೃತಿ ಮೆರೆದಿದ್ದಾರೆ.
ಕಾರ್ಖಾನೆಯ ಮಾಲೀಕ ಚೋಟು ಗುರ್ಜಾರ್ ಮತ್ತು ಆತನ ಸಹಾಯಕ ಮುಖೇಶ್ ಶರ್ಮಾ – ಇಬ್ಬರೂ ಸೇರಿ ಕಾರ್ಮಿಕರನ್ನು ಅರೆಬೆತ್ತಲೆಗೊಳಿಸಿ, ಅಮಾನುಷವಾಗಿ ಥಳಿಸಿ, ಅವರ ಕೈಗಳ ಉಗುರು ಕಿತ್ತು, ವಿದ್ಯುತ್ ಶಾಕ್ ಕೊಟ್ಟು ದೌರ್ಜನ್ಯ ಎಸಗಿದ್ದಾರೆ.
ಸಂತ್ರಸ್ತ ಕಾರ್ಮಿಕರು ಗುಲಾಬ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಕೊರ್ಬಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಾಗ್ಯೂ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಎಸ್‌ಎಚ್‌ಒ ಪ್ರಮೋದ್ ದಡ್ಸೆನಾ ತಿಳಿಸಿದ್ದಾರೆ.