ನೀರು ಕುಡಿಯುವ ತಂಬಿಗೆಯನ್ನು ಮಟ್ಟಿದ್ದಕ್ಕಾಗಿ ದಲಿತ ಸಮುದಾಯದ ಟ್ರ್ಯಾಕ್ಟರ್ ಚಾಲಕನ ಮೇಲೆ ಅಮಾನುಷವಾಗಿ ಹಲ್ಲೆ ಎಸಗಿರುವ ಘಟನೆ ರಾಜಸ್ಥಾನದ ಝುಂಜು ಜಿಲ್ಲೆಯಲ್ಲಿ ನಡೆದಿದೆ. ದಲಿತ ಯುವಕನ ಮೇಲೆ ಇಟ್ಟಿಗೆ ಭಟ್ಟಿಯ ಮಾಲೀಕ ಹಲ್ಲೆ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ವಿನೋದ್ ಯಾದವ್ ನಡೆಸುತ್ತಿದ್ದ ಇಟ್ಟಿಗೆ ಭಟ್ಟಿಯಲ್ಲಿ ದಲಿತ ಯುವಕ ಮೇಘವಾಲ್ ಟ್ರ್ಯಾಕ್ಟರ್ ಓಡಿಸುವ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ, ನೀರು ಕುಡಿಯುವುದಕ್ಕಾಗಿ ನೀರಿನ ತಂಬಿಗೆಯ ಬಳಿ ಹೋಗಿದ್ದಾರೆ. ಆ ಕಾರಣಕ್ಕೆ ಮೇಘವಾಲ್ ಮೇಲೆ ವಿನೋದ್ ಯಾದವ್ ಹಲ್ಲೆ ಎಸಗಿದ್ದು, ಕಾಲಿನಿಂದ ಒದ್ದಿದ್ದಾನೆ.
ಮಾತ್ರವಲ್ಲದೆ, ಮೇಘವಾಲ್ ಅವರನ್ನು ಹರಿಯಾಣಕ್ಕೆ ಎಳೆದೊಯ್ದ ಆರೋಪಿ ವಿನೋದ್, ತಾನು ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ಮೇಘವಾಲ್ ಅವರ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಕುಟುಂಬಸ್ಥರಿಂದ ಹಣ ಪಡೆದು, ಮೇಘವಾಲ್ ಮೇಲೆ ಮತ್ತೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಆತನನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ ಎಂದು ವರದಿಯಾಗಿದೆ.
ಮೇಘವಾಲ್ ಅವರು ರಾಜಸ್ಥಾನಕ್ಕೆ ಬಂದಿದ್ದು, ಪಚೇರಿ ಕಲನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ “ನಾನು ಗಡಿಗೆಯಿಂದ ನೀರು ಕುಡಿಯಲು ತೆರಳಿದ್ದಕ್ಕೆ, ತನ್ನ ಮೇಲೆ ಹಲ್ಲೆ ನಡೆಸಿ, ಥಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.