ಮಂಗಳವಾರ ರಾತ್ರಿ ರಾಜಸ್ಥಾನದಲ್ಲಿರುವ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಗಣಿಯಲ್ಲಿ ಲಿಫ್ಟ್ ಕುಸಿದು ಬಿದ್ದಿದ್ದು, 15 ಮಂದಿ ಅಧಿಕಾರಿಗಳು ಗಣಿಯಲ್ಲಿ ಸಿಕ್ಕಿಕೊಂಡಿದ್ದರು. ಅವರಲ್ಲಿ, 8 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದ 7 ಮಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಗಣಿಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುವ ಪಂಜರದ (ಲಿಫ್ಟ್) ಹಗ್ಗ ತುಂಡಾದ ಪರಿಣಾಮ, ಅದರಲ್ಲಿ ಅಧಿಕಾರಿಗಳು ಗಣಿಯೊಳಗೆ ಸಿಕ್ಕಿಕೊಂಡಿದ್ದರು. ಮೊದಲ ಸುತ್ತಿನಲ್ಲಿ ಮೂವರನ್ನು ರಕ್ಷಿಸಿ ಗಣಿಯಿಂದ ಹೊರ ಕರೆತರಲಾಯಿತು. ಎರಡನೇ ಸುತ್ತಿನಲ್ಲಿ ಇನ್ನೂ ಐವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿಸಲಾದ ಗಾಯಾಳುಗಳನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವ್ಯಕ್ತಿಗಳನ್ನು ಸಹ ಸುಮಾರು ಎರಡು ಗಂಟೆಗಳಲ್ಲಿ ಹೊರತೆಗೆಯಲಾಗುವುದು ಎಂದು ನೀಮ್ ಕಾ ಠಾಣಾ ಅಧಿಕಾರಿ ಶರದ್ ಮೆಹ್ರಾ ತಿಳಿಸಿದ್ದಾರೆ.
“ಜುಂಜುನುವಿನ ಖೇತ್ರಿಯಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಹಗ್ಗ ತುಂಡಾಗಿ ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಅಗತ್ಯವಿರುವ ಎಲ್ಲ ನೆರವನ್ನೂ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಮತ್ತು ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ” ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.