ರಾಜಸ್ಥಾನದಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು, ಮಾಫಿಯಾ ನಡೆಸುತ್ತಿರುವವರ ಗೂಂಡಾಗಿರಿಯೂ ಹೆಚ್ಚುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಬಿಜೆಪಿ ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆ ಎಂಬ ಪ್ರಶ್ನೆಗಳು ರಾಜ್ಯದ್ಯಾಂತ ಕೇಳಿಬರುತ್ತಿವೆ. ಇದೇ ಹೊತ್ತಿನಲ್ಲಿ, ಮರಳು ಮಾಫಿಯಾದ ಗೂಂಡಾಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಜೆಸಿಬಿಗೆ ತಲೆಕೆಳಗಾಗಿ ಕಟ್ಟಿ, ಅಮಾನುಷವಾಗಿ ಥಳಿಸಿದ್ದಾರೆ.
ರಾಜಸ್ಥಾನದ ಬೀವಾಡ್ ಜಿಲ್ಲೆಯ ರಾಯ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನುಷ, ಕ್ರೂರ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಯ್‌ಪುರ್ ಬಳಿಯ ಗುಡಿಯಾ ಗ್ರಾಮದಲ್ಲಿ, ಮರಳು ಮಾಫಿಯಾ ನಡೆಸುವ ತೇಜ್‌ಪಾಲ್ ಸಿಂಗ್‌ಉದಾವತ್ ಎಂಬಾತ ಡೀಸೆಲ್ ಕಳ್ಳತನದ ಶಂಕೆಯ ಮೇಲೆ ಜೆಸಿಬಿ ಚಾಲಕನ ಮೇಲೆ ಕ್ರೌರ್ಯ ಎಸಗಿದ್ದಾನೆ. ಚಾಲಕನನ್ನು ಸರಪಳಿಯಿಂದ ಜೆಸಿಬಿಗೆ ತಲೆಕೆಳಗಾಗಿ ಕಟ್ಟಿಹಾಕಿ, ಸುಮಾರು ಎರಡು/ಮೂರು ಗಂಟೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
मोदी जी ये देखो राजस्थान की हालात,
— THE SOCIETY OF WARRIORS 🦁 (@Warriorsclub_X) May 24, 2025
ये हिस्ट्रीशीटर है जो नेताओं के साथ उठता बैठता है,,,
आपने एक ऐसे व्यक्ति के हाथ में पर्ची दे दी कि इस वक्त राजस्थान में अपराधियों के हौसले बुलंद है ,,,कानून व्यवस्था चरमरा रही है,
@narendramodi @VasundharaBJP @GovindDotasra @BhajanlalBjp pic.twitter.com/w0uVTSPivn
ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಜಸ್ಥಾನದಲ್ಲಿ ಮಾಫಿಯಾ ಆಳ್ವಿಕೆ ಎಷ್ಟು ಕಾಲ ಮುಂದುವರಿಯುತ್ತದೆ? ಪೊಲೀಸರು ಮತ್ತು ಆಡಳಿತದ ಜೊತೆಗೂಡಿ ಆಡುತ್ತಿರುವ ಈ ಭಯಾನಕ ಆಟ ಯಾವಾಗ ನಿಲ್ಲುತ್ತದೆ. ಈ ಬಗ್ಗೆ ಸಾರ್ವಜನಿಕರು ಕೇಳುತ್ತಿದ್ದಾರೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಈ ಲೇಖನ ಓದಿದ್ಧೀರಾ?: ಪಹಲ್ಗಾಮ್ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?
ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜಸ್ಥಾನದಲ್ಲಿ ಮಾಫಿಯಾದ ಗೂಂಡಾಗಿರಿ ಮಿತಿಮೀರಿದೆ. ದುರ್ಬಲ ಬಿಜೆಪಿ ಸರ್ಕಾರದಲ್ಲಿ ಮಾಫಿಯಾಗೆ ಕಾನೂನಿನ ಭಯವಿಲ್ಲ. ಈ ಕ್ರೂರ ಘಟನೆಯು ಬಿಜೆಪಿ ಆಡಳಿತದ ರಾಜ್ಯದಲ್ಲಿ ಅಪರಾಧಿಗಳಿಗೆ ನೀಡಲಾಗುತ್ತಿರುವ ರಾಜಕೀಯ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ, ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಹೇಳಿದ್ದಾರೆ.
“ಘಟನೆಯು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ, ಬದಲಾಗಿ ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ಸಾಮಾನ್ಯ ಜನರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಇಡೀ ವ್ಯವಸ್ಥೆಯ ಮೇಲಿನ ಕಳಂಕವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಾಫಿಯಾಗೆ ನೀಡಲಾಗುತ್ತಿರುವ ರಾಜಕೀಯ ಪ್ರೋತ್ಸಾಹವನ್ನು ಬಹಿರಂಗಪಡಿಸಬೇಕು. ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿದ ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ.