ಪರೀಕ್ಷೆಯ ಸಮಯದಲ್ಲಿ ಕೋಳಿಯನ್ನು ಕತ್ತರಿಸಿ, ಚರ್ಮ ಸುಟ್ಟು, ಸ್ವಚ್ಛಗೊಳಿಸುವಂತೆ ವಿದ್ಯಾರ್ಥಿ ಮೇಲೆ ಶಿಕ್ಷಕನೋರ್ವ ಒತ್ತಡ ಹೇರಿದ ಘಟನೆ ರಾಜಸ್ಥಾನದ ಕೊಟಾಡಾದಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಈ ಆರೋಪ ಕೇಳಿಬರುತ್ತಿದ್ದಂತೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಆರೋಪಿ ಶಿಕ್ಷಕ ಮೋಹನ್ ಲಾಲ್ ದೋಡಾ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಚಿವ ಬಾಬುಲಾಲ್ ಖರಾರಿ ಅವರನ್ನು ಸಂಪರ್ಕಿಸಿ ದೂರು ನೀಡಿದರು. ಹಾಗೆಯೇ ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಚಿವರು ಉಪವಿಭಾಗಾಧಿಕಾರಿ ಹಸ್ಮುಖ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ | ಮಕ್ಕಳು ತನ್ನವಲ್ಲವೆಂದು ಶಂಕಿಸಿ ಕೊಲೆ; ವಿಕೃತ ತಂದೆಯ ಬಂಧನ
ಇನ್ನು ಸುಮಾರು ಒಂದು ತಿಂಗಳ ಹಿಂದೆ ದೋಡಾ ಶಾಲೆಯ ಅಡುಗೆಯವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕೊಟಾಡಾ ಪ್ರದೇಶದ ಶಾಲೆಯ ಇತರ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಹಾಗಾಗಿ ಸುಮಾರು ಒಂದು ತಿಂಗಳಿನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಸಿಗುತ್ತಿಲ್ಲ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸಿದಾಗ ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ ದೋಡಾ 9ನೇ ತರಗತಿಯ ವಿದ್ಯಾರ್ಥಿ ರಾಹುಲ್ ಕುಮಾರ್ ಪಾರ್ಗಿ ಕೋಳಿ ಕತ್ತರಿಸಿ, ಚರ್ಮ ಸುಟ್ಟು ಸ್ವಚ್ಛಗೊಳಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವರದಿಯ ಆಧಾರದ ಮೇಲೆ ಜಿಲ್ಲಾ ಶಿಕ್ಷಣ ಅಧಿಕಾರಿ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.
