ತಮ್ಮ ಆಸ್ತಿಯೆಂದು ರೈತ ಕುಟುಂಬವೊಂದು ಕೃಷಿ ಮಾಡುತ್ತಿದ್ದ ಭೂಮಿಯನ್ನು ತೆರವುಗೊಳಿಸಲು ಬಂದಿದ್ದ ಮಹಿಳಾ ಅಧಿಕಾರಿಯೊಬ್ಬರ ಕೂದಲನ್ನು ಹಿಡಿದು ಗ್ರಾಮದ ಮಹಿಳೆಯೊಬ್ಬರು ಎಳೆದಾಡಿರುವ ಘಟನೆ ರಾಜಸ್ಥಾನದ ತೋಡಭೀಮ್ ಜಿಲ್ಲೆಯ ಗಂಗಾಪುರ ನಗರದಲ್ಲಿ ನಡೆದಿದೆ.
ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತೋಡಭೀಮ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸುನೀತಾ ಮೀನಾ ಮತ್ತು ಗಂಗಾಪುರ ನಗರದ ಸ್ಥಳೀಯರ ನಡುವೆ ತೀವ್ರ ಸಂಘರ್ಷ ನಡೆದಿದೆ. ಘಟನೆಯು ಗುರುವಾರ ಸಂಜೆ ನಡೆಸಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈತರೊಬ್ಬರು ಕೃಷಿ ಮಾಡುತ್ತಿರುವ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಹಕ್ಕು ಹೊಂದಿದ್ದೇವೆಂದು ವಾದಿಸಿದ್ದಾರೆ. ಆದರೂ, ಆ ಭೂಮಿಯನ್ನು ತೆರವುಗೊಳಿಸಲು ಎಸ್‌ಡಿಎಂ ಸುನೀತಾ ಮೀನಾ ಬುಲ್ಡೋಜರ್‌ಗಳ ಮೂಲಕ ಸ್ಥಳಕ್ಕೆ ಬಂದಿದ್ದರು. ಈ ವೇಳೆ, ಮಹಿಳೆಯೊಬ್ಬರು ಸುನೀತಾ ಮೀನಾ ಅವರ ಕೂದಲು ಹಿಡಿದು ಎಳೆದಾಡಿ, ಹಲ್ಲೆ ನಡೆಸಿದ್ದಾರೆ.
ಘಟನೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೂ ಕಾರಣವೆಂದು ಆರೋಪಿಸಲಾಗಿದೆ. ಹೀಗಾಗಿ, ತೋಡಭೀಮ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ದಿಲೀಪ್ ವರ್ಮಾ ಹಾಗೂ 17 ಸಿಬ್ಬಂದಿಗಳಿಗೆ ಗಂಗಾಪುರ ನಗರ ಎಸ್‌ಪಿ ಸುಜೀತ್ ಶಂಕರ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ್ದಾರೆ.
ವರದಿಗಳ ಪ್ರಕಾರ, ಸುನೀತಾ ಮೀನಾ ಅವರನ್ನು ತೋಡಭೀಮ್‌ನಿಂದ ಬೇರೆ ಸ್ಥಳಕ್ಕೆ ಕೆಲ ದಿನಗಳ ಹಿಂದೆಯೇ ವರ್ಗಾವಣೆ ಮಾಡಲಾಗಿದೆ. ತೋಡಭೀಮ್‌ಗೆ ಪೂಜಾ ಮೀನಾ ಎಂಬವರನ್ನು ನಿಯೋಜಿಸಲಾಗಿದೆ. ಆದರೂ, ಪೂಜಾ ಅವರಿಗೆ ಅಧಿಕಾರ ಹಸ್ತಾಂತರಿಸದ ಸುನೀತಾ ಅವರು ಇನ್ನೂ ತೋಡಭೀಮ್‌ನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.