ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ(ಆರ್‌ಪಿಎ) ಸುಮಾರು ಎರಡು ವರ್ಷಗಳ ಕಾಲ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ನಟಿಸಿದ ರಾಜಸ್ಥಾನದ ‘ಮೂಲಿ ದೇವಿ’ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಮೋನಾ ಬುಗಾಲಿಯಾ ಅಲಿಯಾಸ್ ಮೂಲಿ ದೇವಿ ವಿರುದ್ಧ ಜೈಪುರದಲ್ಲಿ ದೂರು ದಾಖಲಾಗಿದ್ದು, 2003ರಿಂದ ಆಕೆ ತಲೆಮರೆಸಿಕೊಂಡಿದ್ದಳು.
ನಕಲಿ ದಾಖಲೆಗಳ ಮೂಲಕ ‘ಮೂಲಿ ದೇವಿ’ ಎಂದು ಹೇಳಿಕೊಂಡು ಪೊಲೀಸ್ ಅಕಾಡೆಮಿಗೆ ಪ್ರವೇಶಿಸಿದ ಈ ಮಹಿಳೆ ತರಬೇತಿಗಳಿಗೆ ಹಾಜರಾಗಿದ್ದಾಳೆ. ಅಲ್ಲದೆ ಸುಮಾರು ಎರಡು ವರ್ಷಗಳ ಕಾಲ ನಿಜವಾದ ಅಧಿಕಾರಿಗಳೊಂದಿಗೆ ಫೋಟೋಗಳನ್ನು ತೆಗೆದುಕೊಂಡಿದ್ದಾಳೆ. ಆಕೆಯ ಬಾಡಿಗೆ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದು, 7 ಲಕ್ಷ ರೂಪಾಯಿ ನಗದು, ಮೂರು ವಿಭಿನ್ನ ಪೊಲೀಸ್ ಸಮವಸ್ತ್ರಗಳು ಮತ್ತು ಪರೀಕ್ಷಾ ದಾಖಲೆಗಳು ಕಂಡುಬಂದಿದೆ. ಮಹಿಳೆ ನೀಡಿದ ನಕಲಿ ಗುರುತು ದಾಖಲೆಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು ನಗರ ಪೊಲೀಸ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ!
ರಾಜಸ್ಥಾನದ ನಾಗೌರಂದ್‌ನ ನಿಂಬಾ ಕೆ ಬಾಸ್ ಗ್ರಾಮದವಳಾದ ಮೂಲಿಯ ತಂದೆ ಟ್ರಕ್ ಚಾಲಕರು. ಅಧಿಕೃತ ದಾಖಲೆಗಳ ಪ್ರಕಾರ, 2021ರಲ್ಲಿ ರಾಜಸ್ಥಾನ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಮೂಲಿ ಅನುತ್ತೀರ್ಣರಾಗಿದ್ದು, ಬಳಿಕ ‘ಮೂಲಿ ದೇವಿ’ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಳೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ತಾನು ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾಗಿದ್ದೇನೆ ಎಂದು ಸುಳ್ಳು ಮಾಹಿತಿ ಹರಡಿದ್ದಾಳೆ.
ನೇಮಕಾತಿಗೊಂಡ ಸಬ್ ಇನ್‌ಸ್ಪೆಕ್ಟರ್‌ಗಳ ವಾಟ್ಸಾಪ್ ಗುಂಪಿನಲ್ಲೂ ಬುಗಾಲಿಯಾ ಇದ್ದು ಕ್ರೀಡಾ ಕೋಟಾದ ಮೂಲಕ ದಾಖಲಾದ ರಾಜಸ್ಥಾನ ಪೊಲೀಸ್ ಅಕಾಡೆಮಿಯ ಈ ಹಿಂದಿನ ಬ್ಯಾಚ್‌ನ ಅಭ್ಯರ್ಥಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಳು ಎಂದು ಹೇಳಲಾಗಿದೆ.
ಬುಗಾಲಿಯಾ ಆರ್‌ಪಿಎ ಪೆರೇಡ್ ಮೈದಾನದಲ್ಲಿ ಹೆಚ್ಚಾಗಿ ಪೂರ್ಣ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂಲಿ ಔಟ್‌ಡೋರ್ ಡ್ರಿಲ್‌ಗಳಲ್ಲೂ ಭಾಗಿಯಾಗುತ್ತಿದ್ದಳು. ಹಲವು ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದು ಯುವ ಆಕಾಂಕ್ಷಿಗಳಿಗೆ ಸಲಹೆ ನೀಡುವ ಕಾರ್ಯಗಳನ್ನು ಮಾಡಿದ್ದಳು. ತರಬೇತಿ ಪಡೆಯುತ್ತಿದ್ದ ಸಬ್ ಇನ್‌ಸ್ಪೆಕ್ಟರ್‌ಗಳು ಅನುಮಾನ ವ್ಯಕ್ತಪಡಿಸಿದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಎಲ್ಲ ಆಪಾದನೆಯನ್ನು ಬುಗಾಲಿಯಾ ಒಪ್ಪಿಕೊಂಡಿದ್ದಾಳೆ.
