ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಬಳಿಕ ನೀಡಿದ್ದ ಹೇಳಿಕೆಯೊಂದರ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದ ತನ್ನ ತಂದೆ, ಸೂಪರ್‍ಸ್ಟಾರ್ ರಜನಿಕಾಂತ್ ಬಗ್ಗೆ ಮಾತನಾಡಿರುವ ಪುತ್ರಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, “ನನ್ನ ತಂದೆ ಸಂಘಿ ಅಲ್ಲ” ಎಂದು ತಿಳಿಸಿದ್ದಾರೆ.
ಮುಂಬರುವ ಫೆಬ್ರವರಿ 9ರಂದು ಬಿಡುಗಡೆಯಾಗಲಿರುವ ‘ಲಾಲ್ ಸಲಾಮ್’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ನಿರ್ದೇಶಕಿ ಐಶ್ವರ್ಯಾ, “ತಮ್ಮ ತಂದೆ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಬೆಂಬಲವಾಗಿದ್ದಾರೆ ಎಂಬ ಟೀಕೆಗಳು ಬರುತ್ತಿದೆ. ಒಂದು ವೇಳೆ ಅವರು ‘ಸಂಘಿ’ ಆಗಿದ್ದಿದ್ದರೆ ‘ಲಾಲ್ ಸಲಾಂ’ ಸಿನಿಮಾ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
‘ಸಂಘಿ’ ಎಂದು ಸಂಘಪರಿವಾರದ ಹಿಂದುತ್ವ ಸಿದ್ಧಾಂತದ ಬೆಂಬಲಿಗರ ವಿರುದ್ಧ ಬಳಸುವ ಪದವಾಗಿದೆ. ಇದೇ ಪದವನ್ನು ಐಶ್ವರ್ಯಾ ರಜನಿಕಾಂತ್ ಅವರು ಬಳಸಿದ್ದು, ತಂದೆಯ ಪರ ಬೆಂಬಲವನ್ನು ಸೂಚಿಸಿದ್ದಾರೆ.
ಲಾಲ್ ಸಲಾಮ್ ಚಿತ್ರದಲ್ಲಿ ರಜನಿಕಾಂತ್ ಮುಸ್ಲಿಂ ಪಾತ್ರದ ‘ಮೊಯ್ದೀನ್ ಭಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘ಲಾಲ್ ಸಲಾಮ್’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭವು ಚೆನ್ನೈನ ಸಾಯಿರಾಮ್ ಇಂಜಿನಿಯರಿಂಗ್ ಕ್ಯಾಂಪಸ್‌ನ ಆವರಣದಲ್ಲಿ ನೆರೆವೇರಿತು.
Rajinikanth is not a ‘Sanghi’, says his daughter at Lal Salaam audio launch https://t.co/VjAJ2uR0ws
— TheNewsMinute (@thenewsminute) January 27, 2024
“ನಾನು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಂಡವು, ಜನರು ಏನನ್ನು ಚರ್ಚಿಸುತ್ತಿದ್ದಾರೆ, ಏನೆಲ್ಲ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನನಗೆ ತೋರಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ನನ್ನ ತಂದೆ ರಜನಿಕಾಂತ್ ಅವರನ್ನು ಜನರು ‘ಸಂಘಿ’ ಎಂದು ಕರೆಯುತ್ತಿರುವುದಾಗಿ ನನ್ನ ಗಮನಕ್ಕೆ ತಂದರು. ನನಗೆ ಸಂಘಿ ಎಂದರೆ ಏನು ಎಂಬುದು ಮೊದಲು ಗೊತ್ತಿರಲಿಲ್ಲ. ನಂತರ ನಾನು ಸಂಘಿ ಎಂದರೆ ಏನು ಎಂದು ಕೇಳಿದೆ. ಆಗ ನಿರ್ದಿಷ್ಟ ರಾಜಕೀಯ ಪಕ್ಷವನ್ನ ಬೆಂಬಲಿಸುವವರನ್ನ ಸಂಘಿ ಎಂದು ಕರೆಯುತ್ತಾರೆ ಎಂಬ ಉತ್ತರ ನನಗೆ ಸಿಕ್ಕಿತು” ಎಂದು ಐಶ್ಚರ್ಯಾ ತಿಳಿಸಿದ್ದಾರೆ.
“ನಾವು ಮನುಷ್ಯರು. ಇದನ್ನೆಲ್ಲ ನೋಡಿ ನನಗೆ ನಿಜವಾಗಿಯೂ ಸಿಟ್ಟು ಬರುತ್ತದೆ. ಸಂಘಿ ಎಂದು ಅವರನ್ನು ಏಕೆ ಕರೆಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಒಂದಂತೂ ಸ್ಪಷ್ಟವಾಗಿ ಹೇಳಬಲ್ಲೆ. ರಜನಿಕಾಂತ್ ‘ಸಂಘಿ’ ಅಲ್ಲ. ಒಂದು ವೇಳೆ ಅವರು ಸಂಘಿ ಆಗಿದ್ದಿದ್ದರೆ ಲಾಲ್ ಸಲಾಂನಂತಹ ಸಿನಿಮಾ ಮಾಡುತ್ತಲೇ ಇರಲಿಲ್ಲ. ಈ ಸಿನಿಮಾವನ್ನು ಮಾನವೀಯತೆ ಇರುವ ವ್ಯಕ್ತಿಯಿಂದ ಮಾತ್ರ ಮಾಡಲು ಸಾಧ್ಯ. ಲಾಲ್ ಸಲಾಂ ಸಿನಿಮಾದ ನೋಡಿ. ಆಮೇಲೆ ನಿಮಗೆ ಇದು ಅರ್ಥವಾಗಬಹುದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ಗೆ ಝಡ್–ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲು ಕೇಂದ್ರ ನಿರ್ಧಾರ
ಜನವರಿ 22ರಂದು ತಮಿಳು ನಟ ಧನುಷ್ ಮತ್ತು ರಜನಿಕಾಂತ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ರಜನಿಕಾಂತ್ ಅವರು ಮಾಧ್ಯಮವೊಂದಕ್ಕೆ ಮಾತನಾಡುತ್ತಾ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದರು.
ಇದನ್ನು ಟೀಕಿಸಿದ್ದ ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್, “ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ. ಆದರೆ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದನ್ನು ನಾನು ಒಪ್ಪಲಾರೆ. ಇದರ ಹಿಂದಿನ ರಾಜಕಾರಣವನ್ನು ಪ್ರಶ್ನೆ ಮಾಡಬೇಕು. ಸಮಸ್ಯೆ ಮತ್ತು ಪರಿಹಾರ ಎನ್ನುವುದನ್ನು ನಾನು ಟೀಕಿಸುತ್ತೇನೆ’ ಎಂದಿದ್ದರು. ಆ ಬಳಿಕ ರಜನಿಕಾಂತ್ ಅವರನ್ನು ‘ಸಂಘಿ’ ಎಂದು ವ್ಯಾಪಕವಾಗಿ ಟೀಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಈ ಹೇಳಿಕೆ ನೀಡಿದ್ದಾರೆ.